ಬೆಂಗಳೂರು: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಇಂದು ವಿಧಾನಸಭೆಯಲ್ಲಿ ಧರಣಿ ನಡೆಸಿದ್ದು, ಈ ವೇಳೆ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು.ವಿಧಾನಸಭೆ ಕಲಾಪ ಗದ್ದಲದ ಬಳಿಕ ಪುನರಾರಂಭವಾದ ವೇಳೆ ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದರು. ಪ್ರಶ್ನೋತ್ತರದ ಬಳಿಕ ಸಭಾಧ್ಯಕ್ಷರು ಶೂನ್ಯ ವೇಳೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ 6,800 ರೂ.ಕುಸಿತವಾಗಿದೆ. ಬೆಂಬಲ ಬೆಲೆ ನೀಡುತ್ತೇವೆ ಎಂದು ಈ ಹಿಂದೆ ಭರವಸೆ ನೀಡಿ ರೈತರ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಲಾಗಿತ್ತು. ಈಗ ರೈತರು ಸಂಕಷ್ಟದಲ್ಲಿದ್ದಾರೆ. ಅರಳಿಕಟ್ಟೆ ಮೇಲೆ ಕುಳಿತು ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯವರು ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವ ಬದಲಾಗಿ ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕೆಂದು ಕಿಡಿಕಾರಿದರು. ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕೊಬ್ಬರಿ ಬೆಲೆ ಕುಸಿತದ ಬಗ್ಗೆ ವಿವರಣೆ ನೀಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎದ್ದು ನಿಂತು ಚುನಾವಣೆಯ ವೇಳೆ ಪ್ರತಿ ಟನ್ ಕೊಬ್ಬರಿಗೆ 15 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು.
ಈಗ ಇಲ್ಲಿ ಆ ಪಕ್ಷದ ಶಾಸಕರು ನಾಚಿಕೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕರ ಹೇಳಿಕೆಗಳ ಪತ್ರಿಕಾ ವರದಿಯನ್ನು ಪ್ರದರ್ಶನ ಮಾಡಿದರು. ಈ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ ದೋಖಾ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ, ರಾಜ್ಯಸರ್ಕಾರವಲ್ಲ ಎಂದು ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟನೆ ನೀಡಿದರು. ಈ ಹಂತದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಹಂತದಲ್ಲಿ ಕೊಬ್ಬರಿಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಈಗಾಗಲೇ ಅಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕರ ಜೊತೆ ಜೆಡಿಎಸ್ ಶಾಸಕರು ಸೇರಿದ್ದರಿಂದಾಗಿ ಗದ್ದಲ ಜೋರಾಯಿತು.