ಬೆಂಗಳೂರು: ಮುಡಾ ಭೂ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ತೋರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಅವರ ರಾಜಕೀಯ ಜೀವನವು ತೆರೆದ ಪುಸ್ತಕವಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ”ಪ್ರಶ್ನೆಯಲ್ಲಿರುವ ಆಸ್ತಿಯನ್ನು ಸರಕಾರ ದಲಿತ ಕುಟುಂಬಕ್ಕೆ ಮಂಜೂರು ಮಾಡಿಲ್ಲ. ಕುಟುಂಬವು ಸರ್ಕಾರದಿಂದ ಹರಾಜಿನಲ್ಲಿ ಭೂಮಿಯನ್ನು ಖರೀದಿಸಿದೆ ಮತ್ತು ಆದ್ದರಿಂದ ಈ ಪ್ರಕರಣದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆಯ ನಿಬಂಧನೆಯು ಅನ್ವಯಿಸುವುದಿಲ್ಲ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ಆರೋಪ ಮಾಡಲು ಯತ್ನಿಸುತ್ತಿವೆ’’ ಎಂದು ಆರೋಪಿಸಿದರು.
”ನಾನು ಸಚಿವನಾಗಿ 40 ವರ್ಷ ಕಳೆದಿದೆ. ಇಂದಿಗೂ ನನ್ನ ವಿರುದ್ಧ ಒಂದು ಸಣ್ಣ ಕಪ್ಪುಚುಕ್ಕೆಯೂ ಇಲ್ಲ. ನನ್ನ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ಬಿಜೆಪಿ ಮತ್ತು ಜೆಡಿಎಸ್ ಹತಾಶವಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ನಾವು 135 ಸ್ಥಾನಗಳನ್ನು ಗೆದ್ದ ನಂತರ ಅವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದ್ದಾರೆ. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗುವುದನ್ನು ಸಹಿಸಿಕೊಳ್ಳುವುದು ಅವರಿಗೆ ಕಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
‘‘ಸದನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಗಲಾಟೆ ಮಾಡಿಲ್ಲ, ಆಡಳಿತ ಪಕ್ಷದ ಶಾಸಕರು ಜನರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಿದರು, ಚರ್ಚೆ ನಡೆಸಿದರು ಇದೆಲ್ಲದರಿಂದ ವಿರೋಧ ಪಕ್ಷಗಳಿಗೆ ಜನಪರ ಉದ್ದೇಶವಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ,” ಎಂದು ಹೇಳಿದರು.
“ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಕಳೆದ ಬಾರಿಗಿಂತ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಅಥವಾ ಮತಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಶೇ.13ರಷ್ಟು ಹೆಚ್ಚು ಮತ ಗಳಿಸಿದ್ದೇವೆ. ಇದರಿಂದ ಹತಾಶರಾಗಿರುವ ಅವರು ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿ ಹಿಡಿದಿದ್ದಾರೆ,” ಎಂದು ಹೇಳಿದರು.