ಬೆಂಗಳೂರು: ರಾಜ್ಯದಲ್ಲಿ ಹೆಣ್ಣನ್ನು ಮುಂದಿಟ್ಟುಕೊಂಡು ಹಣಗಳಿಸುವ ವಂಚಕ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಣ ಗಳಿಕೆಗೆ ಸುಲಭದ ಉಪಾಯವನ್ನು ಕಂಡುಕೊಂಡಿರುವ ವಂಚಕರು ಜನರು ಮಾನ ಮರ್ಯಾದೆಗೆ ಅಂಜಿ ದೂರು ಕೊಡಲು ಹಿಂಜರಿಯುವ ಅಂಶವನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಂದ ಲಕ್ಷಗಟ್ಟಲೇ ಹಣ ಸುಲಿಯುವ ಕೆಲಸದಲ್ಲಿ ತೊಡಗಿದ್ದಾರೆ.
ಇತ್ತೀಚೆಗಷ್ಟೆ ಜಯನಗರ ಪೋಲೀಸರು ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದ ಮೂವರನ್ನು ಬಂಧಿಸಿದ ಬೆನ್ನಲ್ಲೇ ಬುಧವಾರ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣದಲ್ಲಿ ಎಂಬಿಎ ಪದವೀಧರ ಸೇರಿದಂತೆ ಮೂವರನ್ನು ಪುಟ್ಟೇನ ಹಳ್ಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುಂಬೈ ಮೂಲದ ರೂಪದರ್ಶಿ ನೇಹ ಆಲಿಯಾಸ್ ಮೆಹರ್ (30), ಶರಣಪ್ಪ ಬಳಿಗಾರ (48) ಅಬ್ದುಲ್ ಖಾದರ್, (46) ಮತ್ತು ಯಾಸಿನ್ ಷರೀಫ್, (36) ಎಂದು ಗುರುತಿಸಲಾಗಿದ್ದು ಬಳಿಗಾರ್ ಉತ್ತರ ಕನ್ನಡ ಮೂಲದವನಾಗಿದ್ದು , ಖಾದರ್ ಕೊಡಗು ಜಿಲ್ಲೆಯ ಕುಶಾಲನಗರದವನು ಮತ್ತು ಷರೀಫ್ ಬೆಂಗಳೂರಿನ ನಿವಾಸಿ. ಎಂಬಿಎ ಪದವಿ ಪಡೆದಿರುವ ಬಳಿಗಾರ್, ಮಹಿಳೆಯ ಫೋಟೋವನ್ನು ಆನ್ಲೈನ್ ನಲ್ಲಿ ಪ್ರೊಫೈಲ್ ಫೋಟೋವನ್ನಾಗಿಟ್ಟುಕೊಂಡು ಪುರುಷರೊಂದಿಗೆ ಚಾಟ್ ಮಾಡುತ್ತಿದ್ದ ಎನ್ನಲಾಗಿದೆ. ಎಲ್ಲರನ್ನೂ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು ಮಾಡೆಲ್ ಮೆಹರ್ ಳನ್ನು ಮುಂಬೈಗೆ ತೆರಳಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಬೆಂಗಳೂರು ಮೂಲದ 27 ವರ್ಷದ ಯುವಕನನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಈ ಬಂಧನವನ್ನು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದ ಸಂತ್ರಸ್ಥ ಯುವಕ ಮಹಿಳೆಯನ್ನು ಡೇಟಿಂಗ್ ವೆಬ್ಸೈಟ್ ಮೂಲಕ ಸ್ನೇಹ ಬೆಳೆಸಿದ್ದ ನಂತರ ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಿದ್ದರು. ಮಹಿಳೆಯು ತನ್ನ ಪತಿ ದುಬೈನಲ್ಲಿ ನೆಲೆಸಿದ್ದಾನೆ ಹಾಗೂ ತನಗೆ ಒಂಟಿತನ ಕಾಡುತ್ತಿದೆ ಎಂದು ಹೇಳಿಕೊಂಡು ಆತನನ್ನು ನಂಬಿಸಿದ್ದಳು.
ಬಂಧಿತ ರೂಪದರ್ಶಿ ನೇಹಾ ಅಲಿಯಾಸ್ ಮೆಹರ್ ಪ್ರಕರಣದ ಪ್ರಮುಖ ಆರೋಪಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನೇಹಾ ಮೆಹರ್ ಟೆಲಿಗ್ರಾಂ ಆಪ್ ಮೂಲಕ ಬೆಂಗಳೂರಿನಲ್ಲಿ ಲೈಂಗಿಕ ಆಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಬಲೆಗೆ ಕೆಡವುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈಕೆ ಜೆ. ಪಿ. ನಗರ ಐದನೇ ಹಂತದಲ್ಲಿರುವ ತನ್ನ ಬಾಡಿಗೆ ಮನೆಗೆ ಆನ್ ಲೈನ್ ಮೂಲಕ ಸ್ನೇಹಿತರಾದವರನ್ನು ಆಹ್ವಾನಿಸುತ್ತಿದ್ದಳು. ಪುರುಷರು ಮನೆಗೆ ಹೋದಾಗ ತಾನು ಬಿಕಿನಿ ಧರಿಸಿ ಸ್ವಾಗತಿಸುತ್ತಿದ್ದಳು. ಅವರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದಳು. ಈ ಕೃತ್ಯ ಈಕೆ ಮನೆಯಲ್ಲಿ ಮೊದಲೇ ಫಿಕ್ಸ್ ಮಾಡಿದ್ದ ರಹಸ್ಯ ಕ್ಯಾಮೆರಾದಲ್ಲಿ ಸೆರೆ ಆಗುತಿತ್ತು. ಅವರು ಲೈಂಗಿಕ ಕ್ರಿಯೆ ನಡೆಸುವಾಗಲೇ ಹೊರಗಿನಿಂದ ಮೂವರ ಗ್ಯಾಂಗ್ ಮನೆಗೆ ಪ್ರವೇಶಿಸುತ್ತಿತ್ತು.
ಒಳ ಬಂದು ಇಬ್ಬರ ಅರೆನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಬಲವಂತದಿಂದ ಬೆದರಿಸಿ ಸೆರೆ ಹಿಡಿಯುತಿತ್ತು. ಸಂತ್ರಸ್ಥನ ಮೊಬೈಲ್ ನ್ನು ಕಿತ್ತುಕೊಂಡು ಅದರಲ್ಲಿರುವ ಎಲ್ಲಾ ಕಾಂಟ್ಯಾಕ್ಟ್ ಗಳನ್ನೂ ತಮ್ಮ ಮೊಬೈಲ್ ಗೆ ಕಾಪಿ ಮಾಡಿಕೊಂಡು ಈ ಗ್ಯಾಂಗ್ ನಂತರ ಹಣಕ್ಕಾಗಿ ಒತ್ತಾಯಿಸಿದೆ.
ಹಣ ನೀಡದಿದ್ದರೆ ಮಹಿಳೆಯನ್ನೇ ಮದುವೆ ಆಗುವಂತೆ ಸಂತ್ರಸ್ಥ ನಿಗೆ ಬೇಡಿಕೆ ಇಟ್ಟಿದೆ. ಆಕೆ ಮುಸ್ಲಿಂ ಆಗಿರುವುದರಿಂದ ಆಕೆಯನ್ನು ಮದುವೆಯಾಗಲು ಮೊದಲು ಇಸ್ಲಾಂಗೆ ಮತಾಂತರವಾಗಬೇಕು ಎಂದು ಒತ್ತಾಯಿಸಿ ಯುವಕನಿಗೆ ಕೂಡಲೇ ಸುನ್ನತಿ ಮಾಡಿಸಬೇಕು ಎಂದು ಒತ್ತಾಯಿಸಿದೆ. ಈ ಬೇಡಿಕೆಗಳಿಂದ ಭಯಬೀತನಾದ ಯುವಕ ವಂಚಕರ ಮೊಬೈಲ್ ಗೆ 10 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾನೆ. ನಂತರ ಧೈರ್ಯ ತಂದುಕೊಂಡು ಪೋಲೀಸರಿಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೋಲೀಸರು ತನಿಖೆ ನಡೆಸಿದಾಗ ಈ ತಂಡ ಹನಿ ಟ್ರ್ಯಾಪ್ ಮೂಲಕವೇ 12 ಮಂದಿಯನ್ನು ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ತಂಡ ಇದೇ ರೀತಿ ಹಲವು ವರ್ಷಗಳಿಂದಲೇ ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದೆ. ಆದರೆ ಹಣ ಕಳೆದುಕೊಂಡವರು ಮರ್ಯಾದೆ ಹೋಗುತ್ತದೆ ಎಂದು ಪೋಲೀಸರಿಗೆ ದೂರು ನೀಡಲು ಮುಂದಾಗಿಲ್ಲ ಎಂದು ಹೇಳಿರುವ ಪೋಲೀಸರು ಬಂಧಿತರ ಮೊಬೈಲ್ ಗಳಲ್ಲಿ ನೂರಾರು ನಗ್ನ ವಿಡಿಯೋಗಳು ಸಿಕ್ಕಿದ್ದು ಇನ್ನಷ್ಟು ಪ್ರಕರಣಗಳಲ್ಲಿ ಈ ದುಷ್ಕರ್ಮಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್ ಹಾಗೂ ಯಾಸೀನ್ ಎಂಬುವವರನ್ನು ಪೊಲೀಸರು ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಬಂಧಿಸಿದ್ದರು. ಮತ್ತೋರ್ವ ಆರೋಪಿ ನದೀಮ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪುಟ್ಟೇನಹಳ್ಳಿ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.