ಮಕ್ಕಳನ್ನು ಬೆಳೆಸುವುದು ತುಂಬಾ ಜವಾಬ್ದಾರಿಯ ಕೆಲಸ, ಪ್ರತಿದಿನ ಪ್ರತಿಕ್ಷಣ ಅವರ ಜೊತೆಗಿನ ಒಡನಾಟ ಪ್ರೀತಿ, ಆತುರ, ಆತಂಕ ಮತ್ತು ಕಾಳಜಿಯೊಂದಿಗೆ ಅವರು ಏನು ಮಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಎಲ್ಲಾ ಪೋಷಕರ ಇರುವ ಆಸೆಯೊಂದೆ ನಮ್ಮ ಹಾಗೆ ನಮ್ಮ ಮಕ್ಕಳು ಕಷ್ಟ ಪಡುವುದು ಬೇಡ, ಅವರ ಜೀವನ ಚೆನ್ನಾಗಿರ್ಲಿ, ಈ ನಿಟ್ಟಿನಲ್ಲಿ ಹಲವು ವಿಷ್ಯದಲ್ಲಿ ಅವರು ಮಕ್ಕಳಿಗೆ ಜವಾಬ್ದಾರಿ ಹಂಚುವುದನ್ನು ತಪ್ಪಿಸುತ್ತಾರೆ. ಈ ಕಾರಣದಿಂದ ಮಕ್ಕಳು ಪ್ರತಿ ವಿಷಯಕ್ಕೂ ಪೋಷಕರ ಮೇಲೆ ಡಿಪೆಂಡ್ ಆಗುವುದು ಸಾಮಾನ್ಯ. ಆದರೆ ಮಕ್ಕಳಿಗೆ ಹತ್ತು ವರ್ಷದ ನಂತರ ಜವಾಬ್ದಾರಿ ಕೊಡುವುದು ಒಳ್ಳೆಯದು ಎಂದು ಸಂಶೋಧನೆ ಹೇಳುತ್ತದೆ.
ಹಾಗಾದರೆ ಯಾವೆಲ್ಲ ಜವಾಬ್ದಾರಿಗಳನ್ನು ಕೊಡಬಹುದು?
1.ಅವರ ವಸ್ತುಗಳಿಗೆ ಅವರೇ ಜವಾಬ್ದಾರರು:
ಶಾಲೆಗೆ ಹೊರಡುವಾಗ ಪುಸ್ತಕವನ್ನು ವೇಳಾಪಟ್ಟಿಗೆ ಹೊಂದಿಕೆ ಆಗುವಂತೆ ತುಂಬಿಸುವುದರಿಂದ ಹಿಡಿದು, ಅವರ ಬಟ್ಟೆ, ಕೋಣೆಯನ್ನು ಸ್ವಚ್ಛವಾಗಿ ಇಡುವ ವರೆಗೆ ನೀವು ಜವಾಬ್ದಾರಿ ಹಂಚಬಹುದು. ನೆನಪಿಡಿ ನಿಮಗೆ ಇದು ಕಷ್ಟದ ಕೆಲಸ ಆಗಬಹುದು, ಮಕ್ಕಳು ಮೊದಲು ಜವಾಬ್ದಾರಿ ಸರಿಯಾಗಿ ನಿಭಾಯಿಸಲು ಕಷ್ಟ ವಾಗಬಹುದು, ಆದರೂ ಪರವಾಗಿಲ್ಲ, ಜವಾಬ್ದಾರಿ ಕೊಡಿ.
2. ಹಣದ ನಿರ್ವಹಣೆ:
ಹಣ ನಿರ್ವಹಿಸುವ ಜವಾಬ್ದಾರಿ ಮಕ್ಕಳಿಗೆ ದೊಡ್ಡದಾಗಿರಬಹುದು ಆದರೆ ಸಣ್ಣ ವಯಸ್ಸಿನಲ್ಲಿಯೇ ದಿನಸಿ ಸಾಮಾನುಗಳ ಪಟ್ಟಿ ತಯಾರಿಸುವುದು, ಕೂಡಿಸುವಿಕೆ, ಕಳೆಯುವುದು ಗೊತ್ತಿರಬೇಕು. ಅಂಗಡಿಯಲ್ಲಿ ಕೊಟ್ಟ ಚಿಲ್ಲರೆ, ಅದನ್ನು ಕೇಳಿ ಪಡೆಯುವ ಹವ್ಯಾಸ ಇರಬೇಕು. ಹಾಗೆಯೇ ಫಿಗ್ಗಿ ಬ್ಯಾಂಕ್, ಅವರದ್ದೇ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಅದರಲ್ಲಿ ಹಣ ಕೂಡಿಡುವ ಅಭ್ಯಾಸ ಇರಬೇಕು.
3.ಮನೆಯ ನಡೆಸುವ ವಿಷ್ಯದಲ್ಲಿ ಆದ್ಯತೆ:
ಹೌದು. ಹಿರಿಯರು ಮನೆಯನ್ನು ನಡೆಸಿಕೊಂಡು ಹೋಗುತ್ತಾರೆ, ಕೆಲವೊಂದು ಸಲ ಮನೆಗೆ ತರುವ ಪೀಟೋಪಕರಣ, ಇಲೆಕ್ಟ್ರಾನಿಕ್ ಐಟಂಗಳ ವಿಷಯದಲ್ಲಿ ಮಕ್ಕಳನ್ನು ಸೇರಿಸಿಕೊಂಡು ನಿರ್ಧಾರ ಮಾಡುವುದು ಒಳ್ಳೆಯದು. ಇದು ಅವ್ರಿಗೆ ಬೇಕು, ಬೇಡ, ಅಗತ್ಯ ಖರ್ಚು, ದುಂದುವೆಚ್ಚದ ಬಗ್ಗೆ ಅರಿವು ಮೂಡುವಂತೆ ಮಾಡುತ್ತದೆ.
4.ಮಕ್ಕಳು ಕೇಳಿದ್ದೆಲ್ಲ ಕೊಡುವ ಮೊದಲು ಯೋಚಿಸಿ:
ಮಕ್ಕಳ ಅಗತ್ಯತೆಗಳು ಪೋಷಕರಿಗೆ ಹೆಚ್ಚಾಗಿ ತಿಳಿದುರುತ್ತದೆ, ಹಾಗೆಂದು ಅವರು ಕೇಳಿದ್ದನ್ನು ಕೊಡುತ್ತಾ ಬಂದರೆ, ನಿಮಗೆ ಅವರ ಮೇಲೆ ಪ್ರೀತಿ ಇದೆ ಎಂದು ಅರಿಯುತ್ತಾರೆ, ಆದರೆ ಕೊಡುವ ವ್ಯಕ್ತಿ ಮತ್ತು ಆ ವಸ್ತುಗಳ ವಾಲ್ಯೂ ಮಕ್ಕಳಿಗೆ ಅರಿವಾಗುದರಲ್ಲಿ ಅವರ ಮನಸ್ಥಿತಿ ನಾನು ಏನೂ ಕೇಳಿದರೂ ಕೊಡುತ್ತಾರೆ, ಕೊಡಲೇಬೇಕು ಎಂಬಲ್ಲಿಗೆ ಹೋಗುತ್ತದೆ. ಹಾಗಾಗಿ ಕೊಡುವ ಮೊದಲು ಅದನ್ನು ನೀವು ಹೇಗೆ ಖರೀದಿಸುತ್ತೇರಿ, ಮತ್ತು ಅದು ಅವಶ್ಯವೆ ಎಂದು ಚರ್ಚಿಸಿ. ನೀವು ಎಮೋಷನಲ್ ಬ್ಲಾಕ್ಮೇಲ್ ಅನ್ನು ಎದುರಿಸಬಹುದು, ಆದರೂ ನಿಮ್ಮ ಪ್ರಯತ್ನ ಬಿಡಬೇಡಿ.
ಮಕ್ಕಳಿಗೆ ಕೆಲವು ವಿಷಯಗಳು ಅರ್ಥ ಆಗ್ಬೇಕಂದ್ರೆ ಅವರನ್ನು ಆಗಾಗ್ಗೆ ಇನ್ನೊಂದು ಪ್ರಪಂಚಕ್ಕೆ ಪರಿಚಯಿಸಿ. ಅನಾಥಶ್ರಮ, ವೃದ್ಧಆಶ್ರಮಕ್ಕೆ ಮಕ್ಕಳನ್ನು ಕರೆದೋಯ್ಯಿರಿ ಮತ್ತು ಮಕ್ಕಳನ್ನು ಅವರ ಜೊತೆ ಬೆರೆಯಲುಬಿಡಿ. ಮಕ್ಕಳಿಗೆ ಎಲ್ಲಾ ಜವಾಬ್ದಾರಿಯನ್ನು ಒಟ್ಟಿಗೆ ಕೊಡಬೇಡಿ. ನೆನಪಿಡಿ ನೀವು ಎಷ್ಟು ಹೇಳುತ್ತೀರಿ ಎಂಬುದಕ್ಕಿಂತ ಎಷ್ಟು ಹೇಳಿದ್ದನ್ನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಮಕ್ಕಳ ಆಕ್ಷನ್ ನಿರ್ಧಾರಿಸುತ್ತದೆ.