ರಾಜ್ಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಹಿಮ್ಮೆಟ್ಟಿಸಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಥರ್ಮಲ್ ಡ್ರೋನ್ ಬಳಕೆ ಅರಣ್ಯ ಇಲಾಖೆ ಮುಂದಾಗಿದೆ. ಗುಡ್ಡಗಾಡಿನಿಂದ ಆವೃತವಾಗಿರುವ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇತ್ತೀಚೆಗೆ ಆನೆಗಳ ದಾಳಿ ಹೆಚ್ಚಾಗಿದೆ. ಪ್ರಾಣಹಾನಿ ಜೊತೆಗೆ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕಾಡಾನೆಯ ನಿಯಂತ್ರಣಕ್ಕೆ ಥರ್ಮಲ್ ಡ್ರೋನ್ ಕ್ಯಾಮೆರಾದ ಮೊರೆ ಹೋಗಿದೆ.
ಹಗಲು ಮತ್ತು ರಾತ್ರಿ ಕಾಡಾನೆಗಳ ಚಲನವಲನ ಸೆರೆ ಹಿಡಿಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಥರ್ಮಲ್ ಡ್ರೋನ್ ಇದಾಗಿದ್ದು, ಇದನ್ನು ಬಳಸಲು ರಾಜ್ಯದಲ್ಲಿ ಕೇವಲ 8 ಮಂದಿಗಷ್ಟೇ ತರಬೇತಿ ನೀಡಲಾಗಿದೆ. ಈವರೆಗೂ ಖಾಸಗಿ ಡ್ರೋನ್ಗಳನ್ನು ಬಳಸುತ್ತಿದ್ದ ಅರಣ್ಯ ಇಲಾಖೆ ಈಗ ಸ್ವಂತವಾಗಿ ಅಂದಾಜು 24 ಲಕ್ಷ ರೂ. ವೆಚ್ಚದ ಹೈಟೆಕ್ ಡ್ರೋನ್ ಬಳಕೆ ಮಾಡುತ್ತಿದೆ.
ರಾಮನಗರ ಜಿಲ್ಲೆಯಲ್ಲಿ ಡ್ರೋನ್ ಹಾರಾಟ :
ರಾಜ್ಯದಲ್ಲಿ ಜನವರಿಯಿಂದ ಥರ್ಮಲ್ ಡ್ರೋನ್ ಬಳಕೆ ನಡೆಯುತ್ತಿದ್ದು, ಆನೆಗಳನ್ನು ಗುರುತಿಸಲು ರಾಮನಗರ ಜಿಲ್ಲೆಯಲ್ಲಿ ಡ್ರೋನ್ ಹಾರಾಟ ನಡೆಯುತ್ತಿದೆ. ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾವನ್ನು ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಕಳೆದ ಜನವರಿಯಲ್ಲಿ ತರಿಸಲಾಗಿತ್ತು. ದಿಲ್ಲಿಯ ಪರಿಣಿತರ ತಂಡ ರಾಜ್ಯದ 8 ಮಂದಿಗೆ ಈ ಡ್ರೋನ್ ಆಪರೇಟ್ ಮಾಡುವ ತರಬೇತಿ ನೀಡಿದೆ. ಸದ್ಯಕ್ಕೆ ರಾಮನಗರ ಜಿಲ್ಲೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೂವರು ಆಪರೇಟರ್ಗಳು ಬಂದಿದ್ದಾರೆ.
ಈವರೆಗೂ ಹುಲಿ, ಚಿರತೆ, ಆನೆಗಳನ್ನು ಸೆರೆ ಹಿಡಿಯಲು ಈ ಡ್ರೋನ್ಗಳನ್ನು ಬಳಕೆ ಮಾಡಲಾಗಿತ್ತು. ಎಲ್ಲ ಕಡೆಯೂ ಉತ್ತಮ ಫಲಿತಾಂಶ ನೀಡಿರುವ ಈ ಕ್ಯಾಮೆರಾವನ್ನು ಈಗ ಕಾವೇರಿ ವನ್ಯಜೀವಿ ಧಾಮದಲ್ಲಿ ಹೆಚ್ಚಾಗಿರುವ ಆನೆಗಳ ಚಲನವಲನಗಳ ಮೇಲೆ ನಿಗಾವಹಿಸಲು ಬಳಕೆ ಮಾಡಲಾಗುತ್ತಿದೆ.
ಥರ್ಮಲ್ ಡ್ರೋನ್ ಕಾರ್ಯವೈಖರಿ:
ಆನೆಗಳು ಎಲ್ಲಿವೆ ಎಂಬುದರ ಆಧಾರದ ಮೇಲೆ ರಾತ್ರಿ ಮತ್ತು ಹಗಲು ಥರ್ಮಲ್ ಡ್ರೋನ್ ಕ್ಯಾಮೆರಾ ಆಪರೇಟ್ ಮಾಡಲಾಗುತ್ತದೆ. ಆನೆಗಳು ಪತ್ತೆಯಾದ ತಕ್ಷಣ ಕ್ಯಾಮೆರಾದಲ್ಲಿ ಲೊಕೇಷನ್ ಸಮೇತ ಚಿತ್ರ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಕಳಿಸಲಾಗುತ್ತದೆ. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ಆನೆಗಳನ್ನು ಮರಳಿ ಕಾಡಿಗಟ್ಟಲಿದ್ದಾರೆ.
ಜಿಪಿಎಸ್ ಮೂಲಕ ಲೊಕೇಷನ್ ನಿಗದಿ ಮಾಡಿದರೆ ಥರ್ಮಲ್ ಡ್ರೋನ್ ಅಲ್ಲಿಯವರೆಗೂ ನಿರಾಯಾಸವಾಗಿ ಪ್ರಯಾಣಿಸಬಲ್ಲದು. ಆನೆಗಳ ನಿರ್ದಿಷ್ಟ ಜಾಗ ಸೆರೆಹಿಡಿದ ಕೂಡಲೇ ಟಾಸ್ಕ್ ಪೋರ್ಸ್ಗೆ ರವಾನೆಯಾಗುವ ಪೋಟೊಗಳ ಆಧಾರದ ಮೇಲೆ ಆನೆಯನ್ನು ಕಾಡಿಗೆ ಅಟ್ಟಬಹುದಾಗಿದೆ.
ಜೇನು ನೊಣದ ಮಾದರಿಯಲ್ಲಿಯೇ ಶಬ್ದ ಮಾಡುವುದರಿಂದ ಆನೆ, ಹುಲಿ ಸೇರಿದಂತೆ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ. ರಾತ್ರಿ ವೇಳೆ ರಾಡಾರ್ ಮೂಲಕ ಹಾರಾಟ ನಡೆಸಲಿರುವ ಥರ್ಮಲ್ ಡ್ರೋನ್ಗಳಿಂದ ಸ್ಥಳೀಯರಿಗೂ ಸಮಸ್ಯೆ ಉಂಟಾಗುವುದಿಲ್ಲ.
ಥರ್ಮಲ್ ಡ್ರೋನ್ ವಿಶೇಷತೆ:
*ಎಲ್ಲಾ ರೀತಿಯ ವಾತಾವರಣದಲ್ಲೂ ಕಾರ್ಯನಿರ್ವಹಿಸಬಲ್ಲದು.
*ಗರಿಷ್ಠ 2 ಕಿ.ಮೀ. ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿರುವ ಆನೆಗಳ ಚಿತ್ರ ಸ್ಪಷ್ಟವಾಗಿ ಕ್ಲಿಕ್ಕಿಸಬಲ್ಲದು.
*ವಾತಾವರಣಕ್ಕೆ ಅನುಗುಣವಾಗಿ (ಗಾಳಿ ಬೀಸುವ ವೇಗ) ಹಾರಾಟ.
*ಹಗಲು ಹೊತ್ತು ಮಾಮೂಲಿ ಚಿತ್ರ ಹಾಗೂ ರಾತ್ರಿ ನೆಗೆಟೀವ್ ಮಾದರಿಯ ಚಿತ್ರಗಳನ್ನು ಸೆರೆ ಹಿಡಿಯುತ್ತದೆ.
*ಸಾಧಾರಣ ಡ್ರೋನ್ಗಳು ಕಾಡಿನ ಚಿತ್ರಗಳನ್ನಷ್ಟೇ ಸೆರೆ ಹಿಡಿದರೆ ಥರ್ಮಲ್ ಡ್ರೋನ್ ಪ್ರಾಣಿಗಳನ್ನೂ ಗುರುತಿಸಿ ಚಿತ್ರ ಕ್ಲಿಕ್ಕಿಸುತ್ತದೆ.
*ಥರ್ಮಲ್ ಡ್ರೋನ್ ಕ್ಯಾಮೆರಾಗೆ ಮೂರು ಬ್ಯಾಟರಿಗಳಿದ್ದು, ತಲಾ 40 ನಿಮಿಷದವರೆಗೆ ಚಾರ್ಜ್ ಇರುತ್ತವೆ.