ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೇ.20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮಕ್ಕೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಗೆ ಆಹ್ವಾನ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರು ಇಂದು ಸ್ಟಾಲಿನ್ ಅವರಿಗೆ ಕರೆ ಮಾಡಿ ಆಹ್ವಾನಿಸಿದ್ದಾರೆ.
ಮೇ.10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲು ಸಂಪೂರ್ಣ ಅರ್ಹತೆ ದೊರಕಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಕುರ್ಚಿ ಕಸರತ್ತಿಗೆ ಇಂದು ತೆರೆ ಬಿದ್ದಿದೆ. ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿದ್ದು, ಡಿಸಿಎಂ ಆಗಿ ಡಿ. ಕೆ. ಶಿವಕುಮಾರ್ ಇರಲಿದ್ದಾರೆ.
–
ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದ್ದು, ಈ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಚಿತ್ರ ನಿಷೇಧಕ್ಕೆ ನೀಡಿರುವ ಕಾರಣಗಳು ಸೂಕ್ತವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಮಂದಿರಗಳಿಗೂ ಸೂಕ್ತ ಭದ್ರತೆ ನೀಡಬೇಕು. ಜನರು ನಿರಾಳವಾಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಬೇಕು ಎಂದು ತಮಿಳುನಾಡು ಸರ್ಕಾರಕ್ಕೂ ನಿರ್ದೇಶಿಸಿದೆ.
ಕೇರಳದ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಇಸ್ಲಾಂ ಗೆ ಮತಾಂತರ ಮಾಡಿ, ಐಸಿಸ್ ಗೆ ಸೇರ್ಪಡೆಗೊಳಿಸುವ ನೈಜ್ಯಕಥೆಯನ್ನು ಈ ಚಿತ್ರ ಹೊಂದಿದೆ. ಆದರೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಚಿತ್ರವನ್ನು ಬ್ಯಾನ್ ಮಾಡುವುದಾಗಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂ ಮೆಟ್ಟಿಲೇರಿದ್ದರು.
–
2008 ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾ ಎಂಬಾತನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಸಮ್ಮತಿಸಿದೆ.
ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು, ಈ ಹಿನ್ನೆಲೆ ಅಮೆರಿಕ ಆತನನ್ನು ಕಳೆದ ವರ್ಷ ಜೂನ್. 10ರಂದು ಬಂಧಿಸಿತ್ತು. ತಹವ್ವುರ್ ರಾಣಾ 2008 ರಲ್ಲಿ ಮುಂಬೈ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ದಾಳಿಯಲ್ಲಿ 10 ಮಂದಿ ಪಾಕಿಸ್ತಾನಿ ಭಯೋತ್ಪಾದಕರು, ಆರು ಮಂದಿ ಅಮೆರಿಕನ್ನರು ಸೇರಿ ಸುಮಾರು 160 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು.
ಭಾರತದ ಮನವಿಯನ್ನು ಒಪ್ಪಿದ ಯುಎಸ್ ಕೋರ್ಟ್ ದಾಖಲೆಗಳನ್ನು ಪರಿಶೀಲಿಸಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ರಾಣಾನನ್ನು ಭಾರತಕ್ಕೆ ಕರೆತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ಭಯೋತ್ಪಾದಕರು ನಡೆಸಿದ 26/11 ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿ 166 ಜನರು ಸಾವನ್ನಪ್ಪಿದ್ದರು.
–
ಬಿಸಿಲಿನ ತಾಪಕ್ಕೆ ಕಂಗೆಟ್ಟಿರುವ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾರಾಂತ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೇ.21, 22 ರಂದು ದಕ್ಷಿಣ ಒಳನಾಡು ಭಾಗಗಳಲ್ಲಿ ಗುಡುಗು, ಸಿಡಿಲು ಮತ್ತು ಗಾಳಿ ಸಹಿತಿ ಮಳೆಯಾಗಲಿದೆ. ಮೇ.22ಕ್ಕೆ ಕರಾವಳಿ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಾಮಾನವು ಕ್ರಮವಾಗಿ 33 ಮತ್ತು 22 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ವರದಿ ತಿಳಿಸಿದೆ.