ಲಕ್ನೋ: ಉತ್ತರ ಪ್ರದೇಶದ ಭಸ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ ದುರ್ಗಾ ದೇವಿಗೆ ಜಾರಗಣೆ ಕಾರ್ಯಕ್ರಮದ ವೇಳೆ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೌರಿ ಗ್ರಾಮದಲ್ಲಿ ಸೋಮವಾರ ನಡೆದ ಈ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಸಹ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗ್ರಾಮದ ಮುಖಂಡ ಆಶಿಶ್ ನೀಡಿದ ದೂರಿನ ಪ್ರಕಾರ, ಸೋಮವಾರ ರಾತ್ರಿ ಜಾಗರಣೆ ನಡೆಯುತ್ತಿದ್ದಾಗ ಬಾಲಕಿಯು ದೇವತೆಗಳ ವಿಗ್ರಹಗಳನ್ನು ಇರಿಸುವ ವೇದಿಕೆಯ ಮೇಲೆ ಬಂದು ಭಾರತ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಳು.
“ರಾತ್ರಿ 11 ಗಂಟೆ ಸುಮಾರಿಗೆ, ಪೂರ್ವ ನಿರ್ಧರಿತವಾಗಿ ಬಂದಿದ್ದ ಸುಗ್ಗನ್ ಅಲಿ ಎಂಬಾತನ ಮಗಳು ವೇದಿಕೆಯನ್ನು ಹತ್ತಿ, ವಿಗ್ರಹಗಳ ಮೇಲೆ ಕಪ್ಪು ಬಟ್ಟೆಯನ್ನು ಎಸೆದು, ‘ಇಸ್ಲಾಂ ಜಿಂದಾಬಾದ್’, ‘ಪಾಕಿಸ್ತಾನ್ ಜಿಂದಾಬಾದ್’ ಮತ್ತು ‘ಹಿಂದೂಸ್ತಾನ್ ಮುರ್ದಾಬಾದ್’ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಳು. ಆಕೆಯ ಸಹೋದರಿ ಸಾಹಿಬಾ ಮತ್ತು ಮೂವರು ಸಹೋದರರು ಕೂಡ ಆಕೆಯನ್ನು ಬೆಂಬಲಿಸಿದರು, ಆಕೆಯ ತಂದೆ ಸುಗ್ಗನ್ ಅಲಿ, ತಾಯಿ ಸಹಾಬುದ್ದೀನ್ ನಿಶಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಜಾಕಿರ್ ಅಲಿ ಸಹ ಆಕೆಗೆ ಬೆಂಬಲ ನೀಡಿದ್ದಾರೆ ಎಂದು ಆಶಿಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕೃತ್ಯವು ‘ ಜಾಗರಣೆ ಕಾರ್ಯಕ್ರಮಕ್ಕೆ ಸೇರಿದ್ದ ನೂರಾರು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು. “ಇಂತಹ ಕೃತ್ಯಗಳಲ್ಲಿ ತೊಡಗದಂತೆ ಅವರಿಗೆ ಹೇಳಿದಾಗ , ಅವರು ಹಿಂದೂ ಸಮುದಾಯಕ್ಕೆ ಭೀಕರ ಪರಿಣಾಮಗಳನ್ನು ಮತ್ತು ಗಲಭೆಯ ಬೆದರಿಕೆ ಹಾಕಿದರು” ಎಂದು ಗ್ರಾಮದ ಮುಖ್ಯಸ್ಥರು ಹೇಳಿದರು. ಗ್ರಾಮದ ಮುಖಂಡರ ದೂರಿನ ಆಧಾರದ ಮೇಲೆ ಪೊಲೀಸರು ಮಂಗಳವಾರ ಬಾಲಕಿ, ಆಕೆಯ ಸಹೋದರಿ ಸಾಹಿಬಾ (18), ಅರ್ಮಾನ್ (19), ಪೋಷಕರಾದ ಸುಗ್ಗನ್ ಅಲಿ (48) ಮತ್ತು ಸಹಬುದ್ದೀನ್ ನಿಶಾ (42) ಮತ್ತು ಮೊಹಮ್ಮದ್ ಶಮಿ (55) ಮೊಹಮ್ಮದ್ ಝಾಕಿರ್ ಅಲಿ (50) ಅವರ ವಿರುದ್ದ ಐಪಿಸಿಯ ಸೆಕ್ಷನ್ 153 ಬಿ (ಆಪಾದನೆ, ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪಡಿಸುವಿಕೆ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ, ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಭಸ್ತಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದೀಪೇಂದ್ರ ನಾಥ್ ಚೌಧರಿ ಹೇಳಿದ್ದಾರೆ.
ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದು, ಆಕೆಯ 10 ಮತ್ತು 8 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಸಹೋದರರನ್ನು ಬಿಡಲಾಗಿದೆ ಎಂದು ಅವರು ಹೇಳಿದರು, ಆಕೆಯ ಪೋಷಕರು, ಒಬ್ಬ ಸಹೋದರಿ, ಒಬ್ಬ ಸಹೋದರ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಕಾರ್ಯಕ್ರಮದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಘಟನೆಯ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಚೌಧರಿ ಹೇಳಿದರು.
ಈ ಆರೋಪಿಗಳೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಈ ಮತಾಂಧರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.