ಹಿರಿಯ ನಟಿ ಜೂಲಿ ಲಕ್ಷ್ಮಿ, ಮಧು ಹಾಗೂ ಶಾಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ವೆಬ್ ಸೀರಿಸ್ ಸ್ವೀಟ್ ಖಾರಂ ಕಾಫಿ’ ಜುಲೈ 6ರಂದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಲಿದೆ. ಮೂರು ತಲೆಮಾರಿನ ಮಹಿಳೆಯರ ರೋಡ್ ಕಹಾನಿ ಹೇಗಿರಲಿದೆ ಅನ್ನೋದನ್ನು ನೋಡುವುದಕ್ಕೆ ಓಟಿಟಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
ಜೂಲಿ ಲಕ್ಷ್ಮಿ, ಮಧು ಹಾಗೂ ಶಾಂತಿ ಮೂರು ವಿಭಿನ್ನ ತಲೆಮಾರಿನ ಆ ಮೂವರು ಮಹಿಳೆಯರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ತಮಿಳು ವೆಬ್ ಸೀರಿಸ್ ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಬೆಜೋಯ್ ನಂಬಿಯಾರ್, ಕೃಷ್ಣ ಮಾರಿಮುತ್ತು ಮತ್ತು ಸ್ವಾತಿ ರಘುರಾಮನ್ ಈ ಮೂವರು ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ.
ಸ್ವೀಟ್ ಖಾರಂ ಕಾಫಿ’ ಸರಣಿ 8 ಎಪಿಸೋಡ್ಗಳಲ್ಲಿ ಪ್ರಸಾರ ಆಗಲಿದೆ. ಮೂವರು ವಿಭಿನ್ನ ತಲೆಮಾರಿನ ಮಹಿಳೆಯರು ರೋಡ್ ಟ್ರಿಪ್ ಹೊರಡುವ ಕಥೆಯೇ ಈ ವೆಬ್ ಸೀರಿಸ್ನ ಕಥೆ. ಇದರಲ್ಲಿ ಈ ಮೂವರು ಮಹಿಳೆಯರು ಕಳೆದು ಹೋದ ತಮ್ಮ ಗುರುತನ್ನು, ಸ್ವಾಭಿಮಾನವನ್ನು ಹಾಗೂ ಬದುಕುವ ಪ್ರೇರಣೆಯನ್ನು ಮರಳಿ ಪಡೆಯಲು ಯತ್ನಿಸುವುದನ್ನೇ ಭಾವನಾತ್ಮಕವಾಗಿ ತೋರಿಸಿದ್ದಾರೆ.
240 ದೇಶಗಳಲ್ಲಿ ಸ್ಟ್ರೀಮಿಂಗ್ ‘ಸ್ವೀಟ್ ಖಾರಂ ಕಾಫಿ’ ಸುಮಾರು 240 ದೇಶಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಕಂಟೆಂಟ್ ಕೇವಲ ಭಾರತದ ವೀಕ್ಷಕರಿಗಷ್ಟೇ ಸೀಮಿತವಲ್ಲ. ಇದು ಇಡೀ ವಿಶ್ವಕ್ಕೆ ಮೀಸಲಾದ ಕಥೆ ಎಂದು ತಂಡ ಹೇಳಿಕೊಂಡಿದೆ. ಹೀಗಾಗಿ ಸುಮಾರು 240 ದೇಶಗಳಲ್ಲಿ ‘ಸ್ವೀಟ್ ಖಾರಂ ಕಾಫಿ’ಯನ್ನು ವೀಕ್ಷಿಸಬಹುದಾಗಿದೆ.
ಹಿರಿಯ ನಟಿ ಜೂಲಿ ಲಕ್ಷ್ಮೀ ಅವರು ಸದ್ಯ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬದಲಿಗೆ ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಕಳೆದ ವರ್ಷ ಕನ್ನಡದ ‘ತ್ರಿಕೋನ’ ಸಿನಿಮಾದಲ್ಲಿ ನಟಿಸಿದ್ದರು. ಪ್ರಸ್ತುತ ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ತೆಲುಗಿನ ‘ಖುಷಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸ್ವೀಟ್ ಖಾರಂ ಕಾಫಿ ಮೂಲಕ ಅವರು ಒಟಿಟಿ ಮೊದಲ ಸಿರೀಸ್ನಲ್ಲಿ ನಟಿಸಿದ್ದಾರೆ.