ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು-ಶಿರ್ವ, ಇಲ್ಲಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಾದ ಪ್ರತಿಜ್ಞಾ, ಪೂಜಾ, ಶ್ರಾವ್ಯ ಮತ್ತು ಮಮತ ಇವರು ಕಾಪು ತಾಲೂಕಿನ ಶಿರ್ವ ಗ್ರಾಮದ ಮಟ್ಟಾರು ಪ್ರದೇಶದಲ್ಲಿ ಪುರಾತತ್ವ ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಸುಮಾರು 15-16 ನೇ ಶತಮಾನಕ್ಕೆ ಸಂಬಂಧಪಟ್ಟಂತಹ ಪ್ರಾಚ್ಯಾವಶೇಷಗಳನ್ನು ಪತ್ತೆ ಮಾಡಿರುತ್ತಾರೆ.
ಇಲ್ಲಿನ ಮಾಣಿಬೆಟ್ಟುವಿನ ಪಾರ್ಲಪಾಡಿಯಲ್ಲಿ ಜೈನರಿಗೆ ಸಂಬಂಧಪಟ್ಟ ಮುಡಿಂಜ ರಚನೆಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಕಣ ಶಿಲೆ (ಗ್ರಾನೈಟ್)ಯ ಲಿಂಗಮುದ್ರೆ ಕಲ್ಲನ್ನು ಪತ್ತೆ ಮಾಡಿರುತ್ತಾರೆ. ಈ ಲಿಂಗಮುದ್ರೆ ಕಲ್ಲಿನಲ್ಲಿರುವ ಶಿವಲಿಂಗದ ಮೇಲ್ಭಾಗದ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ರೇಖಾಚಿತ್ರವನ್ನು ಕಾಣಬಹುದು.
ಸ್ಥಳೀಯ ಅಟ್ಟಿಂಜ ಪ್ರದೇಶದ ಗಂಗೇಲದಲ್ಲಿ ಕಣ ಶಿಲೆಯ ವಾಮನ ಮುದ್ರೆ ಕಲ್ಲು ಪತ್ತೆಯಾಗಿದ್ದು, ಇದರಲ್ಲಿ ವಾಮನ (ಬ್ರಾಹ್ಮಣ ವಟು) ತನ್ನ ಬಲಗೈಯಲ್ಲಿ ತತ್ರ (ಛತ್ರಿ)ವನ್ನು ಹಾಗೂ ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದು ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಗಳಿವೆ.
ಹಾಗೆಯೇ ಇನ್ನೊಂದು ವಾಮನ ಮುದ್ರೆ ರೀತಿಯ ಕಲ್ಲು ಮಟ್ಟಾರಿನ ಮಲ್ಲಮಾರ್- ಅರ್ಬಿ ಪ್ರದೇಶದಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಇದನ್ನು ಬೊಬ್ಬರ್ಯ ಕಲ್ಲೆಂದು ಪೂಜಿಸಿ ನಡೆದುಕೊಂಡು ಬಂದಿದ್ದಾರೆ.
ಲಿಂಗಮುದ್ರೆ ಮತ್ತು ವಾಮನಮುದ್ರೆ ಕಲ್ಲುಗಳು ಗಡಿಕಲ್ಲುಗಳಾಗಿದ್ದು, ಕ್ರಮವಾಗಿ ಶೈವ ಮತ್ತು ವೈಷ್ಣವರಿಗೆ ಸಂಬಂಧಿಸಿದ್ದಾಗಿವೆ.
ಇಂತಹ ಅನೇಕ ಕಲ್ಲುಗಳು ಮಟ್ಟಾರು ಪ್ರದೇಶದಲ್ಲಿದ್ದು, ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕಣ್ಮರೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ದೊರಕಿರುವ ಪ್ರಾಚ್ಯಾವಶೇಷಗಳ ಆಧಾರದಿಂದ ಮಟ್ಟಾರು ಪ್ರದೇಶವು ಒಂದು ಕಾಲದಲ್ಲಿ ಚಾರಿತ್ರಿಕ ಮಹತ್ವವನ್ನು ಪಡೆದಿರುವ ಸ್ಥಳವಾಗಿತ್ತೆಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಈ ಕ್ಷೇತ್ರಕಾರ್ಯ ಶೋಧನೆಗೆ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಮಾರ್ಗದರ್ಶನ ನೀಡಿದ್ದು, ಸ್ಥಳೀಯರು ಸಹಕಾರ ನೀಡಿರುತ್ತಾರೆ.