ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಹೆಚ್ಚಿನ ಪಿಂಚಣಿ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 11ರವರೆಗೆ ವಿಸ್ತರಣೆ ಮಾಡಿದೆ. ಈ ಮೂಲಕ ಇಪಿಎಫ್ಒ ಎರಡನೇ ಬಾರಿ ಗಡುವನ್ನು ವಿಸ್ತರಿಸಿದಂತಾಗಿದೆ.
ಈ ಮೊದಲು ಮೇ 3, 2023ರಿಂದ ಗಡುವನ್ನು ಜೂನ್ 26, 2023ರವರೆಗೆ ವಿಸ್ತರಿಸಲಾಗಿತ್ತು. ಅರ್ಹ ಪಿಂಚಣಿದಾರರು/ಸದಸ್ಯರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು 15 ದಿನಗಳ ಕೊನೆಯ ಅವಕಾಶವನ್ನು ನೀಡಲಾಗುತ್ತಿದೆ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಆಯ್ಕೆ/ಜಂಟಿ ಆಯ್ಕೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 11, 2023 ರವರೆಗೆ ವಿಸ್ತರಿಸಲಾಗಿದೆ,” ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಹೆಚ್ಚಿನ ಪಿಂಚಣಿಗಾಗಿ ಆಯ್ಕೆಗಳು/ಜಂಟಿ ಆಯ್ಕೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲು ಇಪಿಎಫ್ಒದಿಂದ ಆನ್ಲೈನ್ ಸೌಲಭ್ಯವನ್ನು ಒದಗಿಸಲಾಗಿದೆ. ನವೆಂಬರ್ 04, 2022ರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಸೌಲಭ್ಯವು ಅರ್ಹ ಪಿಂಚಣಿದಾರರಿಗೆ/ಸದಸ್ಯರಿಗೆ ಲಭ್ಯವಿರುತ್ತದೆ,” ಎಂದು ಇಪಿಎಫ್ಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾರು ಅರ್ಜಿ ಸಲ್ಲಿಸಬಹುದು?
5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು.ಇನ್ನು 2014ರ ಸೆಪ್ಟೆಂಬರ್ 1ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಹಾಗೂ ಅಧಿಕ ಪಿಂಚಣಿ ಆಯ್ಕೆ ಮಾಡದ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಒಂದು ವೇಳೆ ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ, ನಿಗದಿತ ಫಾರ್ಮ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ ಒ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕಿದೆ. ಹೆಚ್ಚು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವಾಗ ಆಯುಕ್ತರು ಸೂಚಿಸಿದ ವಿಧಾನದಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಮರು ಹೊಂದಾಣಿಕೆ ಮಾಡಲು ಪಿಂಚಣಿದಾರರು ಅರ್ಜಿಯಲ್ಲಿ ಆತ/ಆಕೆಯ ಒಪ್ಪಿಗೆ ನೀಡೋದು ಅಗತ್ಯ. ಇನ್ನು ನಿಧಿ ಠೇವಣಿಗೆ ಸಂಬಂಧಿಸಿ ಸಂಬಂಧಪಟ್ಟ ಸುತ್ತೋಲೆಗಳಲ್ಲಿ ಸೂಚಿಸಿರುವ ವಿಧಾನವನ್ನು ಬಳಸಲಾಗುತ್ತದೆ.