30ರ ನಂತರ ಸೌಂದರ್ಯ ಕಾಪಾಡಿಕೊಳ್ಳುವುದು ನಿಜಕ್ಕೂ ಕಷ್ಟ ಸಾಧ್ಯ. ಹಾಗಂತ ಅದು ಅಸಾಧ್ಯವೇನಲ್ಲ. ನಮ್ಮ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸದಾ ಅರಳುವ ತ್ವಚೆ ನಿಮ್ಮದಾಗುತ್ತದೆ, ಮಾತ್ರವಲ್ಲ 30ರ ನಂತರವೂ ನವ ಯುವಕ, ಯುವತಿಯರಂತೆ ಕಾಣಬಹುದಾಗಿದೆ.
ಇಂದಿನ ಜಮಾನದವರಿಗೆ ತಮ್ಮ ಸೌಂದರ್ಯದ ಮೇಲೆ ಅತೀವ ಕಾಳಜಿ ಇದ್ದೇ ಇರುತ್ತದೆ. ತಮ್ಮ ತ್ವಚೆಯ ಸೌಂದರ್ಯ ಅರಳಲು ನಾನಾ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ದುಬಾರಿ ಬೆಲೆಯ ಸೌಂದರ್ಯ ಉತ್ಪನ್ನಗಳ ಬಳಸುತ್ತಿರುತ್ತಾರೆ.
ಆದರೆ 30 ನಂತರ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲೆ ಸರಿ. ವಯಸ್ಸು 30 ಆಗುತ್ತಿದ್ದಂತೆ ಬೇಡವೆಂದರೂ ತ್ವಚೆಯಲ್ಲಿ ನೆರಿಗೆ, ಸುಕ್ಕು, ಚರ್ಮ ದಪ್ಪವಾಗುವುದು, ಅಲ್ಲಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಸೌಂದರ್ಯ ಕೆಡುತ್ತದೆ. ಹಾಗಂತ ಇದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯವಿಲ್ಲ. 30ರ ನಂತರವೂ ನವ ತರುಣ, ತರುಣಿಯರಂತೆ ತಾಜಾ, ಹೊಳಪಿನ ತ್ವಚೆ ನಿಮ್ಮದಾಗಬೇಕು ಎಂದರೆ ದೇಹದ ಫಿಟ್ನೆಸ್ ಕಡೆ ಗಮನ ನೀಡಬೇಕು.
30 ನಂತರ ದಿನದಲ್ಲಿ ಕನಿಷ್ಠ 7 ರಿಂದ 8 ಗಂಟೆ ನಿದ್ದೆ ಮಾಡಲೇಬೇಕು. ಇದು ದೇಹ ಹಾಗೂ ಮನಸ್ಸು ಎರಡಕ್ಕೂ ಬಹಳ ಮುಖ್ಯ. ನಿದ್ದೆಯ ಕೊರತೆಯು ಮುಖದ ಮೇಲೆ ಪ್ರತಿಫಲಿತವಾಗುತ್ತದೆ. ಇದು ಮನಸ್ಸಿನ ಚಟುವಟಿಕೆ ಮತ್ತು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ವಯಸ್ಸಿನ ಲಕ್ಷಣಗಳು ಎದ್ದು ಕಾಣಲು ಇದು ಕಾರಣವಾಗುತ್ತದೆ.
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ದೇಹದ ಆಂತರಿಕ ಹಾಗೂ ಬಾಹ್ಯ ಸೌಂದರ್ಯ ಎರಡಕ್ಕೂ ಬಹಳ ಸಹಾಯಕ. ಇದು ಆರೋಗ್ಯಕರ ಚರ್ಮ, ಹಸಿವನ್ನು ನಿಯಂತ್ರಿಸುವುದು, ನಮ್ಮ ಮೆದುಳಿನ ಆರೋಗ್ಯ ಎಲ್ಲದ್ದಕ್ಕೂ ಅವಶ್ಯ. ನಿರ್ಜಲೀಕರಣ ಸಮಸ್ಯೆಯು ಪಿಗ್ಮಂಟೇಷನ್ಗೆ ಕಾರಣವಾಗುತ್ತದೆ.
ಆದ್ದರಿಂದ ನೀರನ್ನು ಚೆನ್ನಾಗಿ ಕುಡಿಯಬೇಕು.
ನೀರಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆ ಮಾಡುವುದರಿಂದ ಮಾಯಿಶ್ಚರೈಸಿಂಗ್ ತ್ವಚೆಯ ಆರೈಕೆಯ ಮಾಡಿದ ಹಾಗೆ. ನಿಮಗೆ ಎಷ್ಟೇ ಸುಸ್ತಾಗಿರಲಿ, ನಿಮ್ಮ ಮೂಡ್ ಹೇಗೆ ಇರಲಿ ಪ್ರತಿನಿತ್ಯ ತ್ವಚೆಯ ಆರೈಕೆಯ ದಿನಚರಿಯನ್ನು ತಪ್ಪಿಸಬಾರದು. ಕ್ಲೆನ್ಸರ್, ಮಾಯಿಶ್ಚರೈಸರ್, ಸನ್ಸ್ಕ್ರೀನ್ಗಳ ಬಳಕೆಯು ಆರೋಗ್ಯಕರ ತ್ವಚೆಗೆ ಬಹಳ ಮುಖ್ಯ. ಇವು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತವೆ. ಸುಕ್ಕು, ನೆರಿಗೆಯಂತಹ ಸಮಸ್ಯೆಗಳ ನಿವಾರಣೆಗೂ ಇದು ಅವಶ್ಯವಾಗಿದೆ.
ವಾರದಲ್ಲಿ ಎರಡು ಬಾರಿ ಭಾರ ಎತ್ತುವ ವ್ಯಾಯಾಮಗಳಲ್ಲಿ ತೊಡಗುವುದು ಉತ್ತಮ. ಇದರಿಂದ ಸ್ನಾಯುಗಳು ಸದೃಢಗೊಳ್ಳುತ್ತವೆ, ಕೊಬ್ಬಿನಾಂಶ ಕಡಿಮೆಯಾಗುತ್ತದೆ, ಚಲನಶೀಲತೆ ಮತ್ತು ವ್ಯಾಯಾಮಗಳು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಸೌಂದರ್ಯ ಎನ್ನುವುದು ಕೇವಲ ದೇಹಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತಹ ವ್ಯಾಯಾಮಗಳನ್ನು ಮಾಡಿಕೊಂಡು ಆರೋಗ್ಯವಾಗಿಯೇ ಇರುವ ಹಾಗೆ ನೋಡಿಕೊಂಡು ಅದರಿಂದ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.