ಸಿಲಿಕಾನ್ ಸಿಟಿ ಬೆಂಗಳೂರು ಪ್ರತಿದಿನ ವೇಗಗತಿಯಲ್ಲಿ ಸಾಗುತ್ತಿರುವ ನಗರಗಳಲ್ಲಿ ಒಂದಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. 2022ನೇ ಸಾಲಿನಲ್ಲಿ ವಾಹನಗಳ ಸಂಖ್ಯೆ 1.09 ಕೋಟಿ ತಲುಪಿದ್ದು, ದಿನಕ್ಕೆ ಬರೋಬ್ಬರಿ 2000 ವಾಹನಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿದೆ.
ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಅಪಘಾತಗಳು ಸಂಭವಿಸಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿನ ರಸ್ತೆಗಳು ಕೇವಲ ಗುಂಡಿಗಳಿಂದ ಕೂಡಿರುತ್ತದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೋಲಿಸರು ಎಲ್ಲಾ ಅಂಶಗಳನ್ನು ಎಳೆ ಎಳೆಯಾಗಿ ಬೇರ್ಪಡಿಸಿ ವರದಿ ಸಲ್ಲಿಸಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಬಗ್ಗೆ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ.
ವರ್ಷದಿಂದ ವರ್ಷಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿರುವ ಹಾಗೆ ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿಯೂ ಏರಿಕೆಯಾಗಿದೆ.
ಮಾರಣಾಂತಿಕ ಅಪಘಾತಗಳು ಹಾಗೂ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ
ವರ್ಷ | ಅಪಘಾತಗಳು | ಮೃತರು |
ಸ್ವಯಂ ಅಪಘಾತ |
ಮೃತರು | ಒಟ್ಟು ಮೃತರು |
2020 | 468 | 493 | 164 | 164 | 657 |
2021 | 468 | 499 | 150 | 152 | 651 |
2022 | 577 | 595 | 175 | 177 | 772 |
ಬೆಂಗಳೂರು ನಗರದಲ್ಲಿ 2020 ಹಾಗೂ 2022ಕ್ಕೆ ಹೋಲಿಸಿದರೆ ಸುಮಾರು 120 ಪ್ರಕರಣಗಳು ಹೆಚ್ಚಾಗಿವೆ. ಆದರೆ 2020 ಹಾಗೂ 2021ರ ನಡುವೆ ಅಪಘಾತ ಪ್ರಕರಣಗಳು ಕೊರೋನಾ ಲಾಕ್ ಡೌನ್ ಸಲುವಾಗಿ ಕ್ರಮೇಣ ಕಡಿಮೆಯಾಗಿರುವುದನ್ನು ಕಾಣಬಹುದು.
2020ನೇ ಸಾಲಿನಲ್ಲಿ ನಡೆದ ಮಾರಣಾಂತಿಕ ಅಪಘಾತದಲ್ಲಿ ಒಟ್ಟು 418 ಪುರುಷರು ಹಾಗೂ 75 ಮಹಿಳೆಯರು, ಸ್ವಯಂ ಅಪಘಾತದಲ್ಲಿ 162 ಪುರುಷರು ಓರ್ವ ಮಹಿಳೆ ಮೃತಪಟ್ಟವರಾಗಿದ್ದಾರೆ.
ಇನ್ನು 2021ನೇ ಸಾಲಿನಲ್ಲಿ ನಡೆದ ಮಾರಣಾಂತಿಕ ಅಪಘಾತದಲ್ಲಿ ಒಟ್ಟು 403 ಪುರುಷರು ಹಾಗೂ 96 ಮಹಿಳೆಯರು, ಸ್ವಯಂ ಅಪಘಾತದಲ್ಲಿ 150 ಪುರುಷರು ಇಬ್ಬರು ಮಹಿಳೆ ಮೃತಪಟ್ಟವರಾಗಿದ್ದಾರೆ.
ಇತ್ತೀಚಿಗೆ ಇನ್ನು 2022ನೇ ಸಾಲಿನಲ್ಲಿ ನಡೆದ ಮಾರಣಾಂತಿಕ ಅಪಘಾತದಲ್ಲಿ ಒಟ್ಟು 493 ಪುರುಷರು ಹಾಗೂ 102 ಮಹಿಳೆಯರು, ಸ್ವಯಂ ಅಪಘಾತದಲ್ಲಿ 172 ಪುರುಷರು ಐವರು ಮಹಿಳೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಈ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟವರ ವಯಸ್ಸು 21ರಿಂದ 60ರೊಳಗಿನವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ಮೂರು ವರ್ಷಗಳಲ್ಲಿ ಮೃತಪಟ್ಟವರಲ್ಲಿ ಪಾದಚಾರಿಗಳ ಸಂಖ್ಯೆಯು ಹೆಚ್ಚಾಗಿಯೇ ಇದೆ. 2020ರಲ್ಲಿ 164 ಜನ, 2021ರಲ್ಲಿ 161 ಜನ, 2022ರಲ್ಲಿ ಬರೋಬ್ಬರಿ 247 ಮಂದಿ ಪಾದಾಚಾರಿಗಳು ಬಲಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ 2022ರಲ್ಲಿ ದ್ವಿಚಕ್ರ ವಾಹನ ಸವಾರರ ಅಪಘಾತದ ಸಂಖ್ಯೆಯೇ ಹೆಚ್ಚಾಗಿದ್ದು, ಮಾರಣಾಂತಿಕ ಅಪಘಾತದಲ್ಲಿ 597 ಹಾಗೂ ಸ್ವಯಂ ಅಪಘಾತದಲ್ಲಿ 175 ವಾಹನಗಳು ಅಪಘಾತಕ್ಕೊಳಗಾಗಿದೆ.
ಈ ಎಲ್ಲಾ ಅಪಘಾತಗಳ ಪೈಕಿ ರಾಷ್ಟ್ರೀಯ ಹೆದ್ದಾರಿ, ಮುಖ್ಯ ರಸ್ತೆ, ಉಪಮುಖ್ಯ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಹಾಗೆಯೇ ಮಾರಣಾಂತಿಕ ಅಪಘಾತಗಳು ಹೆಚ್ಚಾಗಿ ಪಾದಾಚಾರಿಗೆ ಡಿಕ್ಕಿ ಹೊಡೆದು 2022ರಲ್ಲಿ 246 ಅಪಘಾತಗಳು, ವಾಹನ ಹಿಂದಿನಿಂದ ಡಿಕ್ಕಿ 143 ಹಾಗೂ ವಾಹನದ ಬದಿಗೆ ಡಿಕ್ಕಿ ಹೊಡೆದ ಸಂಖ್ಯೆ 74 ಅಪಘಾತಗಳು ಸಂಭವಿಸಿದ್ದು, ಇನ್ನುಳಿದಂತೆ ಇತರೆ ಎಲ್ಲಾ ಕಾರಣಗಳನ್ನು ದಾಖಲಿಸಿ ಒಟ್ಟು 577 ಅಪಘಾತಗಳು ಸಂಭವಿಸಿವೆ.
ಓವರ್ ಸ್ಪೀಡ್, ಮದ್ಯಪಾನ ಮಾಡಿ ವಾಹನ ಸಂಚರಿಸುವುದು, ವೀಲಿಂಗ್, ಸಿಗ್ನಲ್ ಜಂಪ್, ತ್ರಿಪಲ್ ರೈಡಿಂಗ್ ಹಾಗೂ ಇತರೆ ಸಂಚಾರಿ ನಿಯಮ ಜಾರಿಯಡಿಯಲ್ಲಿ ದಾಖಲು ಮಾಡಿರುವ ಒಟ್ಟು ಪ್ರಕರಣಗಳು 2020ರಲ್ಲಿ 83,83,737, 2021ರಲ್ಲಿ 93,05,857 ಹಾಗೂ 2022ರಲ್ಲಿ 1,04,49,571 ಪ್ರಕರಣಗಳು ದಾಖಲಾಗಿವೆ.
ಇನ್ನು ಮುಂದೆಯಾದರು ಬೆಂಗಳೂರಿನ ಮಂದಿ ಸ್ವಲ್ಪ ಜಾಗೃತರಾಗಿ ವಾಹನ ಚಲಾಯಿಸಬೇಕು. ಇಲ್ಲವೆಂದರೆ ಅಪಘಾತಗಳು, ಮರಣಗಳ ಸಂಖ್ಯೆ ಇನ್ನು ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಪೊಲೀಸರು ಸಂಚಾರಿ ನಿಯಮಗಳನ್ನು ಮತ್ತಷ್ಟು ಬಿಗಿ ಗೊಳಿಸುತ್ತಿದ್ದು, ಜನರ ಸುರಕ್ಷತೆಗಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.