ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಇಂದು ಈಜಿಪ್ಟ್ನತ್ತ ಪ್ರಯಾಣ ಬೆಳೆಸಿದ್ದಾರೆ. ಬಹು ಕುತೂಹಲ ಕೆರಳಿಸಿದ್ದ ಯುಎಸ್ ಭೇಟಿಯ ಸಂದರ್ಭದಲ್ಲಿ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಬಿದ್ದಿದ್ದು, ಅವುಗಳಲ್ಲಿ ಪ್ರಮುಖ ಒಪ್ಪಂದಗಳ ವಿವರ ಇಲ್ಲಿದೆ.
ಫೈಟರ್ ಜೆಟ್ ಎಂಜಿನ್ ತಯಾರಿಕೆ ಒಪ್ಪಂದ:
ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ನಡೆದ ಮಹತ್ವದ ಕೈಗಾರಿಕಾ ಒಪ್ಪಂದಗಳಲ್ಲಿ ತೇಜಸ್ ಫೈಟರ್ ಜೆಟ್ಗೆ ಎಂಜಿನ್ ತಯಾರಿಸುವುವ ಒಪ್ಪಂದವು ಒಂದಾಗಿದೆ. ಅಮೆರಿಕದ ಜಿಇ ಏರೋಸ್ಪೇಸ್ ಮತ್ತು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ (ಎಚ್ಎಎಲ್) ಮಧ್ಯೆ ಜೂನ್ 22, ಗುರುವಾರದಂದು ಎಂಒಯು ಒಪ್ಪಂದವಾಗಿದೆ. ಭಾರತೀಯ ವಾಯುಸೇನೆಗೆ ಸೇರಿದ ತೇಜಸ್–ಎಂಕೆ2 ಎಂಬ ಎಲ್ಸಿಎ ಫೈಟರ್ ಜೆಟ್ಗೆ ಎಫ್414 ಎಂಜಿನ್ಗಳನ್ನು ಈ ಎರಡು ಕಂಪನಿಗಳು ಜೊತೆ ಸೇರಿ ತಯಾರಿಸಲಿವೆ. ಮಿಗ್-29 ಮತ್ತು ಮಿರೇಜ್2000 ಯುದ್ಧವಿಮಾನಗಳ ಕಾಲಾವಧಿ ಮುಗಿಯುತ್ತಿರುವುದರಿಂದ ಅವುಗಳ ಬದಲಿಗೆ ತೇಜಸ್ ಎಲ್ಸಿಎ ಜೆಟ್ ವಿಮಾನಗಳನ್ನು ಸೇನೆಗೆ ಬಳಸಲಾಗುತ್ತದೆ.
ಎಫ್414 ಎಂಜಿನ್ಗಳು ಜಿಇ ಏರೋಸ್ಪೇಸ್ ಅಭಿವೃದ್ಧಿಪಡಿಸಿದ್ದಾಗಿವೆ. ಈ ಎಂಜಿನ್ಗಳ ಶೇ. 80ರಷ್ಟು ತಂತ್ರಜ್ಞಾನವನ್ನು ಎಚ್ಎಎಲ್ಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಬಳಸಿ ಜಿಇ ಏರೋಸ್ಪೇಸ್ನ ತಾಂತ್ರಿಕ ಸಹಾಯದೊಂದಿಗೆ ಎಚ್ಎಎಲ್ ಈ ಎಫ್414 ಎಂಜಿನ್ಗಳನ್ನು ಭಾರತದಲ್ಲೇ ತಯಾರಿಸಲಿದೆ.
31 ಎಂಕ್ಯೂ ಸೀ ಗಾರ್ಡಿಯನ್ ಡ್ರೋನ್ಗಳ ಖರೀದಿ ಒಪ್ಪಂದ:
ಭಾರತದ ರಕ್ಷಣಾ ಸಚಿವಾಲಯವು ಎಂಕ್ಯೂ ಸೀ ಗಾರ್ಡಿಯನ್ ಡ್ರೋನ್ಗಳನ್ನು ಅಮೆರಿಕಾದ ಜನರಲ್ ಆಟೋಮಿಕ್ಸ್ನಿಂದ ಖರೀದಿಸಲು ಅನುಮೋದಿಸಿದೆ. ಈ ಯುದ್ಧ ಡ್ರೋನ್ಗಳ ತಯಾರಕರಾದ ಜಿಇ ಭಾರತದಲ್ಲಿ ಡ್ರೋನ್ ಜೋಡಣೆ ಘಟಕವನ್ನು ಸ್ಥಾಪಿಸಲಿದೆ. ಭಾರತೀಯ ನೌಕಾಪಡೆಗೆ ೧೫ ಸೀ ಗಾರ್ಡಿಯನ್ ಡ್ರೋನ್ಗಳು ಮತ್ತು ಸೇನೆ ಮತ್ತು ವಾಯು ಪಡೆಗೆ ತಲಾ ೮ ಸ್ಕೈ ಗಾರ್ಡಿಯನ್ ಡ್ರೋನ್ಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಗುಜರಾತ್ನಲ್ಲಿ ಮೈಕ್ರೋನ್ ಟೆಕ್ನಾಲಜಿ ಕಾರ್ಖಾನೆ:
ಅಮೆರಿಕದ ಖ್ಯಾತ ಮೆಮೊರಿ ಚಿಪ್ ತಯಾರಿಕಾ ಕಂಪನಿ ಮೈಕ್ರಾನ್ ಟೆಕ್ನಾಲಜಿ ಐಎನ್ಸಿ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಗುಜರಾತ್ನಲ್ಲಿ ಸ್ಥಾಪಿಸಲಿದೆ. ಗುಜರಾತ್ನಲ್ಲಿ ಹೊಸ ಚಿಪ್ ಜೋಡಣೆ ಮತ್ತು ಪರೀಕ್ಷಾ ಸೌಲಭ್ಯಕ್ಕಾಗಿ 825 ಮಿಲಿಯನ್ ಡಾಲರ್ವರೆಗೆ ಅಂದರೆ ಸುಮಾರು 6,762 ಕೊಟಿ ರೂ.ವರೆಗೆ ಹೂಡಿಕೆ ಮಾಡುವುದಾಗಿ ಸಂಸ್ಥೆ ಹೇಳಿದೆ. ಭಾರತದ ಕೇಂದ್ರ ಸರ್ಕಾರ ಮತ್ತು ಗುಜರಾತ್ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಸ್ಥಾಪನೆಯಾಗುತ್ತಿರುವ ಈ ಉತ್ಪಾದನಾ ಘಟಕದಲ್ಲಿ ಒಟ್ಟು 2.75 ಬಿಲಿಯನ್ ಡಾಲರ್ (ಸುಮಾರು 22,542 ಕೋಟಿ ರೂ.) ಹೂಡಿಕೆ ಮಾಡಲಾಗುವುದು ಎಂದು ಮೈಕ್ರಾನ್ ಹೇಳಿದೆ. ಇದರಲ್ಲಿ ಶೇ. 50ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಹೂಡಿಕೆ ಮಾಡಲಿದ್ದರೆ, ಶೇ. 20ರಷ್ಟನ್ನು ಗುಜರಾತ್ ರಾಜ್ಯ ಸರ್ಕಾರ ಹೂಡಲಿದೆ. ಉಳಿದ ಮೊತ್ತವನ್ನು ಮೈಕ್ರಾನ್ ಟೆಕ್ನಾಲಜಿ ಹೂಡಿಕೆ ಮಾಡಲಿದೆ.
ಎಚ್1ಬಿ ವೀಸಾ ನಿಯಮಾವಳಿಗಳ ಸಡಿಲಿಕೆ:
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸದ ನಡುವೆ ಭಾರತೀಯರು ಉದ್ಯೋಗಿಗಳು ಕೆಲಸಕ್ಕೆಂದು ಅಮೆರಿಕಕ್ಕೆ ಹೋಗಲು ಅಥವಾ ಅಲ್ಲಿಯೇ ಉಳಿದುಕೊಳ್ಳಲು ಸಹಾಯವಾಗಲು ಹೆಚ್-1ಬಿ ವೀಸಾವನ್ನು ನಿಯಮವನ್ನು ಸಡಿಲಗೊಳಿಸಲು ಜೊ ಬೈಡನ್ ಸರ್ಕಾರವು ಚಿಂತನೆ ನಡೆಸಿದೆ. ಹೆಚ್-1ಬಿ ವೀಸಾ ಸಡಿಲಿಕೆ ಅಮೆರಿಕಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿನ ಪ್ರಮುಖ ಬೆಳವಣಿಗೆಯಾಗಿದೆ.
ಎಚ್1ಬಿ ವೀಸಾ 3 ವರ್ಷದ ಅವಧಿಯದಾಗಿದ್ದು, ವೀಸಾ ಅವಧಿ ಮುಗಿಯುವ ವೇಳೆ ಅದರ ನವೀಕರಣಕ್ಕಾಗಿ ವೀಸಾದಾರರು ಸ್ವದೇಶಕ್ಕೇ ಹೋಗಬೇಕಿತ್ತು. ಈ ನಿಯಮವನ್ನು ಬದಲಿಸಿರುವ ಬೈಡೆನ್ ಸರ್ಕಾರ, ಈಗ ಅಮೆರಿಕದಲ್ಲೇ ವೀಸಾ ನವೀಕರಣ ಮಾಡಿಕೊಳ್ಳಲು ಅನುಮತಿ ನೀಡಿದೆ. 2022ರಲ್ಲಿ 4.42 ಲಕ್ಷ ಎಚ್1ಬಿ ವೀಸಾದಾರರು ಅಮೆರಿಕದಲ್ಲಿದ್ದು, ಇವರಲ್ಲಿ ಭಾರತೀಯರ ಪಾಲು ಶೇ.73 ಆಗಿದೆ. ಕಳೆದ ವರ್ಷ 1.25 ಲಕ್ಷ ಭಾರತೀಯರಿಗೆ ಎಚ್1ಬಿ ವೀಸಾ ನೀಡಲಾಗಿತ್ತು.
ಆರ್ಟೆಮಿಸ್ ಒಪ್ಪಂದ :
ಚಂದ್ರಯಾನ, ಮಂಗಳಯಾನದ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಸಲುವಾಗಿ ನಡೆದಿರುವ ಮಹತ್ವದ ಆರ್ಟೆಮಿಸ್ ಒಪ್ಪಂದಕ್ಕೆ ಭಾರತ ಕೂಡಾ ಸಹಿ ಹಾಕಿದೆ. ಈ ಮೂಲಕ ಅಮೆರಿಕದ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆಗೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಉಭಯ ದೇಶಗಳು ಈ ಕುರಿತ ಒಪ್ಪಂದಕ್ಕೆ ಸಹಿಹಾಕಿವೆ. ಆರ್ಟೆಮಿಸ್ ಯೋಜನೆಯ ಜೊತೆಗೆ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಪ್ರಯಾಣ ಕೈಗೊಳ್ಳಲೂ ಉಭಯ ದೇಶಗಳು ಸಮ್ಮತಿಸಿವೆ. ಆರ್ಟೆಮಿಸ್ ಯೋಜನೆಯ ಭಾಗವಾಗಿ 2025ರಲ್ಲಿ ಚಂದ್ರನ ಮೇಲೆ ಮತ್ತೊಮ್ಮೆ ಮಾನವ ಸಹಿತಯಾನ ಕೈಗೊಳ್ಳುವ ಗುರಿಯನ್ನು ಅಮೆರಿಕ ಹಾಕಿಕೊಂಡಿದೆ. ಇದರ ಜೊತೆಗೆ ಮಂಗಳಯಾನ ಸೇರಿದಂತೆ ಇತರೆ ಗ್ರಹಗಳು, ಬಾಹ್ಯಾಕಾಶದ ಅನ್ವೇಷಣೆಯನ್ನು ಹೊಂದಿದೆ.
ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಅಮೆರಿಕ ರಾಯಭಾರಿ ಕಚೇರಿ:
ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ತೆರೆಯುವುದಾಗಿ ಅಮೆರಿಕ ಘೋಷಿಸಿದೆ. ಪ್ರತಿಯಾಗಿ ಭಾರತವು ಸಿಯಾಟಲ್ನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಘೋಷಣೆಯನ್ನು ಮಾಡಿದೆ.
ಇದಲ್ಲದೆ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನದಲ್ಲೂ ಪಾಲುದಾರಿಕೆಗೆ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ.