ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಬಿಜೆಪಿಯ ಸುನಾಮಿ ಬೀಸಿದೆ. ಚುನಾವಣೆಯ ಕಾವು ಏರುತ್ತಿದೆ. ನಾನು ರಾಜ್ಯದ ಉದ್ದಗಲಕ್ಕೂ ಪ್ರಯಾಣ ಬೆಳೆಸಿದ್ದೇನೆ. ಈ ಬಾರಿ ಬಿಜೆಪಿಯ ಸರ್ಕಾರ ನೂರಕ್ಕೆ ನೂರು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪರ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು.
ಕಾಂಗ್ರೆಸ್ ನವರಿಗೆ ದಿಕ್ಕು ತಪ್ಪಿದೆ. ಸಿದ್ದರಾಮಯ್ಯ ಒಂದು ರೀತಿ, ಡಿಕೆಶಿ ಒಂದು ರೀತಿ ಮಾತನಾಡುತ್ತಾರೆ. 2013-18ರಿಂದ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ ಇಲಾಖೆಯಲ್ಲಿ, ಬಿಡಿಎ, ಎಸ್ಸಿ ಎಸ್ಟಿ ಮಕ್ಕಳ ದಿಂಬು ಹಾಸಿಗೆಯಲ್ಲಿ ಲಂಚ ಹೊಡೆದಿದ್ದಾರೆ. ಕಾಂಗ್ರೆಸ್ ಅನೇಕ ಯೋಜನೆಗಳಲ್ಲಿ 100% ಭ್ರಷ್ಟಾಚಾರ ಮಾಡಿದೆ ಎಂದರು.
ಕಾಂಗ್ರೆಸ್ ನಾಯಕರು ಈಗ ಲಿಂಗಾಯತ ಜಪ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮನೆಯ ಒಳಗೆ ಬಿಟ್ಟುಕೊಳ್ಳುತ್ತಾರೆ. ಚುನಾವಣೆ ಮುಗಿದ ಮೇಲೆ ಮನೆಯ ಹೊರಗೆ ಹಾಕುತ್ತಾರೆ. ಕಾಂಗ್ರೆಸ್ ಅಂದರೆ ಬ್ರಿಟಿಷರ ಬೀಜ, ಅವರು ಒಡೆದು ಆಳುವ ನೀತಿ ಅನುಸರಿಸುತ್ತಾರೆ. ಧರ್ಮ ಒಡೆಯಲು ಪ್ರಯತ್ನ ಮಾಡಿದರು. ಜಾತಿಗಳನ್ನು ಸಣ್ಣ ಸಣ್ಣ ಜಾತಿಗಳಾಗಿ ಒಡೆದಿದ್ದಾರೆ ಎಂದರು.
ಎಸ್ಸಿ, ಎಸ್ಟಿಗೆ ಕಾಂಗ್ರೆಸ್ ಏನು ಮಾಡಿದೆ. ನಮ್ಮ ಅಂಬೇಡ್ಕರ್ ಅವರು ಎಸ್ಸಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಅಂತ ಹೇಳಿದರು. ಹರಿಹರದ ಪ್ರೊ. ಕೃಷ್ಣಪ್ಪನವರು ಎಸ್ಸಿ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡಿದರು. ಅವರ ಒಂದು ಸ್ಮಾರಕ ಮಾಡಲು ಆಗಲಿಲಲ್ಲ. ಹಿಂದೆ ಇಲ್ಲಿನವರೇ ಸಮಾಜ ಕಲ್ಯಾಣ ಇಲಾಖೆ ಸಚಿವರಿದ್ದರು. ಮೀಸಲಾತಿ ಹೆಚ್ಚಳ ಮಾಡಲು ವಿರೋಧ ಮಾಡಿದರು. ನಾನು ಜೇನು ಹುಳ ಕಡಿಸಿಕೊಂಡು ಆ ಸಮುದಾಯಕ್ಕೆ ಜೇನು ತುಪ್ಪ ತಿನ್ನಿಸಿದ್ದೇನೆ ಎಂದರು.
ಸಿದ್ದರಾಮಯ್ಯ ಅವರು ಒಳ ಮೀಸಲಾತಿ ನೀಡಲು ಹಿಂದೇಟು ಹಾಕಿದರು. ನಾನು ಒಳ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದೇನೆ. ಒಕ್ಕಲಿಗರು, ಲಿಂಗಾಯತರು ಮೀಸಲಾತಿ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಅವರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ ಎಂದರು.
ಹರಿಹರ ಕೈಗಾರಿಕಾ ಕೇಂದ್ರ ಇಲ್ಲಿ ಒಂದು ಕೈಗಾರಿಕಾ ಟೌನ್ ಶಿಪ್ ಮಾಡುತ್ತೇವೆ. ಕನಿಷ್ಟ 10,000 ಜನರಿಗೆ ಉದ್ಯೊಗ ನೀಡಲಾಗುತ್ತದೆ. ಒಂದು ಕಾಲದಲ್ಲಿ ಕೈಗಾರಿಕಾ ಕೇಂದ್ರವಾಗಿತ್ತು, ನಾವು ಅದಕ್ಕೆ ಇಲ್ಲಿ ಕೈಗಾರಿಗೆ ಪುನರ್ ಸ್ಥಾಪಿಸಲು ತೀರ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ ನವರು ಸುಳ್ಳು ಗ್ಯಾರೆಂಟಿ ಕೊಡುತ್ತಿದ್ದಾರೆ. ಚುನಾವಣೆ ಸಂದರ್ಬದಲ್ಲಿ ಅಕ್ಕಿ ಹೆಚ್ಚಳ ಮಾಡಿದರು. ಕೇಂದ್ರದ ಮೋದಿ ಅಕ್ಕಿಗೆ ಸಿದ್ದರಾಮಯ್ಯ ಫೊಟೋ ಹೆಸರಿನ ಚೀಲ ಹಾಕಿದರು. ಕಾಂಗ್ರೆಸ್ ಭರವಸೆ ಚುನಾವಣೆ ಮುಗಿದ ನಂತರ ಗಳಗಂಟಿ ಆಗುತ್ತವೆ ಎಂದರು.
ಬೈರಂಪಾಗಿ ನೀರಾವರಿ ಯೋಜನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಅನುಮೋದನೆ ನೀಡಲಾಗುವುದು. ಹರಿಶ್ ಎಲ್ಲ ಸಮುದಾಯದ ವಿಶ್ವಾಸ ಗಳಿಸಿದ್ದಾರೆ. ಮೇ 10 ರಂದು ಬಿಜೆಪಿಗೆ ಮತ ಹಾಕಿಸಿ, 13 ಕ್ಕೆ ಬಿಜೆಪಿಯ ವಿಜಯೋತ್ಸವ ಆಚರಣೆ ಮಾಡೋಣ. ನಿಮ್ಮೆಲ್ಲರ ಆಶೀರ್ವಾದ ಬೆಂಬಲ ಇರಲಿ ಎಂದು ಮನವಿ ಮಾಡಿದರು.