ಕೇರಳದಲ್ಲಿ ನಂದಿನಿ ಮಳಿಗೆ ಹೆಚ್ಚಿಸಿದ ವಿಚಾರಕ್ಕೆ ವಿವಾದ ಉಂಟಾದ ಬೆನ್ನಲ್ಲೇ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್) ದುಬೈನ ಕರಾಮ ನಗರದಲ್ಲಿ ನೂತನವಾಗಿ ನಂದಿನಿ ’ಕೆಫೆ ಮ’ ಆರಂಭಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ರಾಜ್ಯದ ಹೆಮ್ಮೆಯ ನಂದಿನಿ ಬ್ರಾಂಡ್ ಉತ್ಪನ್ನಗಳನ್ನು ದೇಶದ ಗಡಿಯಾಚೆಗಿನ ವಿದೇಶಿಯರು ಸವಿಯುವ ಅವಕಾಶವನ್ನು ನೀಡಿದಂತಾಗುತ್ತದೆ.
ಕೆಎಂಎಫ್ ಉತ್ಪನ್ನಗಳಿಗೆ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆಯಿದ್ದರೂ ಕೂಡಾ ಇದು ಕೇವಲ ಮಧ್ಯಮ ವರ್ಗದ ಜನರಿಗೆ ಮಾತ್ರ ಸೀಮಿತವಾಗಿದ್ದು, ಶ್ರೀಮಂತ ವರ್ಗದವರನ್ನು ಸೆಳೆಯಲು ಸಾಧ್ಯವಾಗಿರಲಿಲ್ಲ ಈ ಕಾರಣಕ್ಕೆ ನಂದಿನಿ ಉತ್ಪನ್ನಗಳ ವಹಿವಾಟಿಗೆ ಕಾರ್ಪೊರೇಟ್ ಸ್ಪರ್ಶ ನೀಡುವ ಉದ್ದೇಶದೊಂದಿಗೆ ಆರಂಭಿಸಿರುವ ‘ಕೆಫೆ ಮೂ’ ಮಳಿಗೆಗಳು ಆರಂಭಿಸಲಾಯಿತು. ‘ಕೆಫೆ ಮೂ’ ಯುವ ಪೀಳಿಗೆಯನ್ನು ಮತ್ತು ಆರ್ಥಿಕ ಸ್ಥಿತಿವಂತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ಕೆಫೆ ಮೂ’ ಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿರುವುದರಿಂದ ಕೆಎಂಎಫ್ ತನ್ನ ಮೊದಲ ಅಂತಾರಾಷ್ಟ್ರೀಯ ಶಾಖೆ ‘ಕೆಫೆ ಮೂ’ ಶೀಘ್ರವೇ ದುಬೈನಲ್ಲಿ ತೆರೆಯಲು ಮುಂದಾಗಿದೆ.
ದುಬೈನ ಕರಾಮ ನಗರದಲ್ಲಿ ನೂತನವಾಗಿ ಆಗಸ್ಟ್ನಲ್ಲಿ ಆರಂಭವಾಗಲಿರುವ ಕೆಫೆ ಮೂ ಮಳಿಗೆಗೆ ನಂದಿನಿ ಉತ್ಪನ್ನಗಳನ್ನು ಬೆಂಗಳೂರಿನಿಂದ ಗುರುವಾರ ರಫ್ತು ಮಾಡಲಾಯಿತು. ನಂದಿನಿ ಉತ್ಪನ್ನಗಳ ಸಾಗಣೆ ವಾಹನಗಳಿಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹಸಿರು ನಿಶಾನೆ ತೋರಿಸಿದ್ದಾರೆ.
ಏನೆಲ್ಲಾ ಸಿಗುತ್ತೆ?
ಫಿಲ್ಟರ್ ಕಾಫಿ, ಟೀ, ಮಿಲ್ಕ್ ಶೇಕ್, ಫಿಜ್ಜಾ, ಐಸ್ಕ್ರೀಂ, ಸಲಾಡ್, ಪನ್ನೀರ್ ಪಾಪ್ಕಾರ್ನ್, ಫ್ರೆಂಚ್ ಫ್ರೈಸ್, ಡೆಸರ್ಟ್ಸ್, ಬರ್ಗರ್, ಸ್ಕೂಪ್ಸ್, ಕೇಕ್, ದೋಸೆ ಸೇರಿದಂತೆ ಭಕ್ಷ್ಯಗಳ ವ್ಯಾಪಕ ಶ್ರೇಣಿಯೇ ಈ ಮಳಿಗೆಯಲ್ಲಿದೆ. ತುಪ್ಪ, ಬೆಣ್ಣೆಯಿಂದ ಹಿಡಿದು ಸಿಹಿ ತಿಂಡಿಗಳವರೆಗೆ ನಂದಿನಿ ಬ್ರ್ಯಾಂಡ್ನ ಎಲ್ಲಾ ಉತ್ಪನ್ನಗಳು ಈ ಮಳಿಗೆಯಲ್ಲಿ ಲಭ್ಯವಿದೆ.
ದೇಶದಲ್ಲಿ ಆರಂಭವಾಗಲಿದೆ ‘ಕೆಫೆ ಮೂ’ ನೂತನ ಮಳಿಗೆಗಳು:
ಯುವ ಪೀಳಿಗೆಯ ಜೀವನ ಶೈಲಿಗೆ ಅನುಗುಣವಾಗಿ ರಾಜ್ಯದಲ್ಲಿ 13 ಹಾಗೂ ಹೊರ ರಾಜ್ಯಗಳಲ್ಲಿ 8 ಕೆಫೆ ಮೂ ಮಳಿಗೆಗಳನ್ನು ತೆರೆಯಲಾಗಿದೆ. ಕೆಫೆ ಕಾಫಿ ಡೇ, ಸ್ಟಾರ್ ಬಕ್ಸ್, ಮೆಕ್ ಡೊನಾಲ್ಡ್ ಮಳಿಗೆಗಳ ಮಾದರಿಯಲ್ಲಿಯೇ ಕೆಫೆ ಮೂ ಮಳಿಗೆ ಕಾರ್ಯಚರಣೆ ನಡೆಸಲಿವೆ. ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಆರಂಭವಾಗಿರುವ ‘ಕೆಫೆ ಮೂ’ ಮಳಿಗೆಗಳಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆಯುತ್ತಿದೆ. ಹೊಸದಿಲ್ಲಿ, ಹೈದರಾಬಾದ್, ಚೆನ್ನೈ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲೂ ಸದ್ಯದಲ್ಲೇ ಕೆಫೆ ಮಳಿಗೆಗಳು ಕಾರ್ಯಾರಂಭ ಮಾಡಲಿವೆ.