ಈ ರೌಂಡ್ ನಲ್ಲಿವೆ ಪ್ರಮುಖ ರಾಜ್ಯ, ರಾಷ್ಟ್ರ ಸುದ್ದಿಗಳು
ರಾಜ್ಯ ಸುದ್ದಿಗಳು
ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ ಕೊರೆತ ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಇಂದು ಪಡುಬಿದ್ರೆಯ ಕಾಡಿ ಪಟ್ಣದಲ್ಲಿ, ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಈ ಬಾರಿ ತಡವಾಗಿ ಮಳೆ ಆರಂಭಗೊಂಡಿದ್ದರು ಸಹ ಪ್ರಾಕೃತಿಕ ವಿಕೋಪದಿಂದ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು, ಇವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ. ಗಳ ಪರಿಹಾರವನ್ನು ವಿತರಿಸಲಾಗಿದೆ ಜಿಲ್ಲೆಯಲ್ಲಿ ಮಳೆಯಿಂದ ಜೀವ ಹಾನಿ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಾತಿ ಅಸಮಾನತೆ ಅಳಿಸಬೇಕಾದರೆ ಶಿಕ್ಷಣದಲ್ಲಿ ವೈಚಾರಿಕತೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕತೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನದ ವಿಕಾಸ ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗ ಆಗಬಾರದು, ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ಜತೆಗೆ ನಿರುದ್ಯೋಗಿ ಯುವ ಸಮೂಹಕ್ಕೆ 24 ತಿಂಗಳ ಕಾಲ ಯುವನಿಧಿ ನೀಡಲು ನಿರ್ಧರಿಸಿದ್ದೇವೆ ಎಂದರು.
ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ: ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭರವಸೆ ನೀಡಿದರು.
ಅಕಾಡೆಮಿಗಳ ನೇಮಕಾತಿಗೆ ಸಮಿತಿ ರಚನೆ: ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ಸ್ಕ್ರೀನಿಂಗ್ ನಡೆಸುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಳೆಗೆ 21 ಬಲಿ: 40ಕ್ಕೂ ಹೆಚ್ಚು ಜಾನುವಾರುಗಳು ಸಾವು
ರಾಜ್ಯದಲ್ಲಿ ಮಳೆಗೆ 20 ಜನರು ಬಲಿಯಾಗಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೃಷ್ಣಭೈರೇಗೌಡ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು.
ಕರಾವಳಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲು ಸಿದ್ದವಿದ್ದು, ಹಾನಿಯಾದ ಮನೆಗಳಿಗೆ 1.25 ಲಕ್ಷ ಪರಿಹಾರ ನೀಡುತ್ತೇವೆ ಎಂದರು.
ಜೈನಮುನಿ ಹತ್ಯೆ ಪ್ರಕರಣ: ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಹಿರೇಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ನಮ್ಮ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಆರೋಪಿ ಕಾನೂನಿನಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳು
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಸಿ ಕೋಚ್ ದರ ಶೇ. 25ರಷ್ಟು ಕಡಿತ
ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕರ ಸಿಹಿ ಸುದ್ದಿ ನೀಡಿದ್ದು, ವಂದೇ ಭಾರತ್ ರೈಲು ಸೇರಿದಂತೆ ಎಲ್ಲಾ ರೈಲುಗಳ ಎಸಿ ಕೋಚ್ ಗಳ ಟಿಕೆಟ್ ದರವನ್ನು ಶೇ.25 ರಷ್ಟು ಕಡಿತಗೊಳಿಸಲಾಗಿದೆ.
ಕಳೆದ ಒಂದು ತಿಂಗಳಿನಿಂದ ರೈಲಿನ ಎಸಿ ಕೋಚ್ ಗಳಲ್ಲಿ ಶೇ. ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿದೆ. ಹೀಗಾಗಿ ಎಸಿ ಕೋಚ್ ಟಿಕೆಟ್ ದರದಲ್ಲಿ ಶೇ. 25ರಷ್ಟು ಕಡಿತ ಮಾಡಿದೆ. ಟಿಕೆಟ್ ಮೂಲ ಬೆಲೆಯಲ್ಲಿ ಶೇ. 25ರಷ್ಟು ಕಡಿತ ಮಾಡಲಾಗಿದೆ. ಈ ದರವನ್ನು ತಕ್ಷಣದಿಂದಲೇ ಜಾರಿ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಟಿಕೆಟ್ ಇಳಿಕೆಯು ರಜಾ ದಿನ, ವಿಶೇಷ ರೈಲುಗಳು, ಹಬ್ಬದ ದಿನಗಳಲ್ಲಿನ ಹೆಚ್ಚುವರಿ ವಿಶೇಷ ರೈಲುಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಎರಡು ತಿಂಗಳಿಂದ ಅಮರನಾಥದಲ್ಲಿ 6 ಯಾತ್ರಿಕರ ಸಾವು
ಕಳೆದ ಎರಡು ದಿನಗಳಲ್ಲಿ ಆರು ಮಂದಿ ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದು, ಈ ವರ್ಷದ ಯಾತ್ರೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ ಪರ್ವತದಲ್ಲಿನ ಕಡಿಮೆ ಆಮ್ಲಜನಕದ ಸಾಂದ್ರತೆಯಿಂದ ಹೃದಯ ಸ್ತಂಭನದಿಂದಾಗಿ ಅಮರನಾಥ ಯಾತ್ರಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಹವಾಮಾನ ವೈಪರೀತ್ಯದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಯಾತ್ರಿಕರ ಅನುಕೂಲಕ್ಕಾಗಿ ಎರಡನೇ ದಿನವೂ ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ: ಮೂವರು ತೃಣ ಮೂಲ ಕಾರ್ಯಕರ್ತರ ಸಾವು
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ಚುನಾವಣೆ ವೇಳೆ ಸಂಭವಿಸಿದ ವ್ಯಾಪಕ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
2024ರ ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಂತೆಯೇ ಮೂರು ಹಂತದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ ವೇಳೆ ಮತಗಟ್ಟೆಗಳನ್ನು ಧ್ವಂಸಗೊಳಿಸಲಾಗಿದ್ದು, ವ್ಯಾಲೆಟ್ ಪೇಪರ್ ಗಳಿಗೆ ಬೆಂಕಿ ಹಚ್ಚಲಾಗಿದೆ.
ಶನಿವಾರ ಬೆಳಗ್ಗೆ ನಡೆದ ಈ ಕೃತ್ಯ ನಾಡಿಯಾ, ಮುರ್ಷಿದಾಬಾದ್ ಮತ್ತು ಮಾಲ್ಡಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ವಿವಿಧ ಜಿಲ್ಲೆಗಳಲ್ಲಿ ಜನರನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಹಿಂಸಾತ್ಮಕ ಘಟನೆಗಳನ್ನು ಖಂಡಿಸಿದ ಅವರು,ಇದು ನಮ್ಮೆಲ್ಲರಿಗೂ ಕಳವಳವನ್ನುಂಟು ಮಾಡಿದೆ ಎಂದರು.