ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಮಣಿಪಾಲ್ ಸೆಂಟರ್ ಫಾರ್ ಬಯೋಥೆರಾಪಿಟಿಕ್ಸ್ ರಿಸರ್ಚ್ [ಎಂಸಿಬಿರ್]ನ ವತಿಯಿಂದ ಪ್ರೊಟೀನ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ [ಎಫ್ಪಿಎಲ್ಸಿ] ಮತ್ತು ಬಯೋ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ [ಬಯೋ-ಎಲ್ಸಿ] ತಂತ್ರಜ್ಞಾನದ ಕಾರ್ಯಾಗಾರವನ್ನು ಎಂಸಿಬಿಆರ್ ಲೆಕ್ಟರ್ ಹಾಲ್ನಲ್ಲಿ ಇಂದು ಉದ್ಘಾಟಿಸಲಾಯಿತು. ಈ ಕಾರ್ಯಾಗಾರವು ಜುಲೈ 27, 2024 ರವರೆಗೆ ನಡೆಯಲಿದ್ದು ಇದರಲ್ಲಿ ಜೈವಿಕ ತಂತ್ರಜ್ಞಾನ [ಬಯೋಟೆಕ್ನಾಲಜಿ] ಮತ್ತು ಜೀವ ವಿಜ್ಞಾನ [ಲೈಫ್ ಸಾಯನ್ಸಸ್] ಗಳಲ್ಲಿ ಬಳಕೆಯಾಗುವ ಮಹತ್ತ್ವದ ತಂತ್ರಜ್ಞಾನದ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುವಂಥ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗಗಳ ಡಾ. ಶರತ್ ಕೆ ರಾವ್, ಅವರು ಸಂಬಂಧಿತ ಕ್ಷೇತ್ರಗಳಲ್ಲಿ ತಾಂತ್ರಿಕ ಪ್ರಾವೀಣ್ಯತೆಯನ್ನು ಕಾಪಾಡಿಕೊಳ್ಳಲು ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. ಅವರು ತಮ್ಮ ಪರಿಣತಿಯನ್ನು ಹೆಚ್ಚಿಸಲು ಮತ್ತು ತಮ್ಮ ಕ್ಷೇತ್ರಗಳಿಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಕಾರ್ಯಾಗಾರವನ್ನು ಬಳಸಿಕೊಳ್ಳುವಂತೆ ಅವರು ಭಾಗವಹಿಸಿದವರನ್ನು ಪ್ರೋತ್ಸಾಹಿಸಿದರು.
ಕಂಟ್ರಿ ಬಯೋಫಾರ್ಮಾದ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕ ಮತ್ತು ಬೆಂಗಳೂರಿನ ಅಜಿಲೆಂಟ್ ಟೆಕ್ನಾಲಜೀಸ್ನಲ್ಲಿ ವಿಜ್ಞಾನಿಯಾಗಿರುವ ಡಾ. ವಾದಿರಾಜ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡುತ್ತ, ‘ಜೀವ-ಔಷಧಿ [ಬಯೋಫಾರ್ಮಾ]ಯ ಉದ್ಯಮಾಭಿವೃದ್ಧಿ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಕ್ರೊಮಾಟೋಗ್ರಫಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೀವಔಷಧೀಯವಿಜ್ಞಾನದ ಸುಧಾರಣೆಗೆ ಮೂಲಭೂತವಾಗಿ ಕ್ರೊಮಾಟೋಗ್ರಫಿ ತಂತ್ರಜ್ಞಾನವು ಅವಶ್ಯವಾಗಿದೆ. ಜೀವ-ಔಷಧಿ [ಬಯೋಫಾರ್ಮಾ]ದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರು ಕ್ರೊಮ್ಯಾಟೋಗ್ರಫಿ ತಂತ್ರಜ್ಞಾನ ಬಳಕೆ ಮತ್ತು ಪ್ರಯೋಗವನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರಕ್ಕೆ ಮಹತ್ತ್ವವಿದೆ’ ಎಂದರು.
ಕಾರ್ಯಾಗಾರದ ಆಯೋಜನ ಸಮಿತಿಯ ಅಧ್ಯಕ್ಷ ಮತ್ತು ಮಣಿಪಾಲ್ ಸೆಂಟರ್ ಫಾರ್ ಬಯೋಥೆರಾಪಿಟಿಕ್ಸ್ ರಿಸರ್ಚ್ [ಎಂಸಿಬಿರ್]ನ ಸಂಸ್ಥಾಪಕ ಸಂಚಾಲಕರಾದ ಡಾ. ರವಿರಾಜ್ ಎನ್. ಎಸ್. ಅವರು ಪ್ರಸ್ತಾವನೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಅವರು ತಮ್ಮ ಭಾಷಣದಲ್ಲಿ, ‘ಮಣಿಪಾಲ್ ಸೆಂಟರ್ ಫಾರ್ ಬಯೋಥೆರಾಪಿಟಿಕ್ಸ್ ರಿಸರ್ಚ್ [ಎಂಸಿಬಿರ್] ಬಯೋಥೆರಾಪಿಟಿಕ್ಸ್ನ ಕ್ಷೇತ್ರಗಳಲ್ಲಿ ನಿರಂತರ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಓಷಧೀಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿಗೆ ಮಹತ್ತ್ವದ ಕೊಡುಗೆ ನೀಡುತ್ತಿದೆ. ಎಂಸಿಬಿಆರ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಕೌಶಲವನ್ನು ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆಗೆ ಬದ್ಧವಾಗಿದೆ. ಬಯೋಥೆರಾಪಿಟಿಕ್ಸ್ ಕ್ಷೇತ್ರದಲ್ಲಿ ಸಂಶೋಧಕರನ್ನು ಮತ್ತು ವೃತ್ತಿಪರರನ್ನು ಆವಶ್ಯಕ ವೃತ್ತಿಕೌಶಲದೊಂದಿಗೆ ತರಬೇತಿಗೊಳಿಸಿ ಶೈಕ್ಷಣಿಕ ಸಂಶೋಧನೆ ಮತ್ತು ಔದ್ಯಮಿಕ ಕ್ಷೇತ್ರಗಳ ಅಂತರವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ’ ಎಂದರು.
ಎಂಸಿಬಿರ್ನ ಸಹಾಯಕ ಪ್ರಾಧ್ಯಾಪಕ ಮತ್ತು ಆಯೋಜನ ಕಾರ್ಯದರ್ಶಿ ಡಾ. ಸೌವಿಕ್ ಡೇ ಅವರು ಕಾರ್ಯಾಗಾರದ ವಿವರಗಳನ್ನು ನೀಡಿದರು, ಸಿಂಜೀನ್ ಇಂಟರ್ನ್ಯಾಶನಲ್ ಲಿ. ನ ಬಯೋಫಾರ್ಮಾ ಟೆಕ್ನಿಕಲ್ ಅಪರೇಶನ್ಸ್ ಆ್ಯಂಡ್ ಎನಲೈಟಿಕಲ್ ಡೆವಲಪ್ಮೆಂಟ್ ಬಯೋಲಾಜಿಕ್ಸ್ ನ ಡಾ. ಅಮರನಾಥ್ ಚಟರ್ಜಿ ಅವರು ಕಾರ್ಯಾಗಾರದ ಆಶಯಭಾಷಣ ಮಾಡಿದರು.
ಎಂಸಿಬಿಆರ್ನ ಸಹಾಯಕ ಪ್ರಾಧ್ಯಾಪಕ ಡಾ. ಅಭಯರಾಜ್ ಜೋಶಿ ಧನ್ಯವಾದ ಸಮರ್ಪಿಸಿದರು. ಸಂಶೋಧನ ವಿದ್ಯಾರ್ಥಿ ಅನಿರುದ್ಧ್ ಶ್ರೀನಿವಾಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಾಧ್ಯಮ ವಿಚಾರಣೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ: ಉಪ ನಿರ್ದೇಶಕರು ಸಾರ್ವಜನಿಕ ಸಂಪರ್ಕ ಮತ್ತು ಸಂವಹನ, ದೂರವಾಣಿ: 7338625909, ಇಮೇಲ್: sachin.karanth@manipal.edu