ಇದು ವಿಚಿತ್ರವಾದರೂ ನಿಜವಾಗಿಯೂ ನಡೆದಿರುವ ಘಟನೆ. ಮೆಕ್ಸಿಕೊದ ಮೇಯರ್ ಒಬ್ಬರು ಸಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ಹೆಣ್ಣು ಮೊಸಳೆಯನ್ನು ಮದುವೆಯಾಗಿದ್ದಾರೆ. ಇದನ್ನು ನೀವು ನಂಬಲೇಬೇಕು. ತನ್ನ ಜನರಿಗೆ ಒಳ್ಳೆಯದಾಗಲಿ ಅನ್ನೋ ಉದ್ದೇಶಕ್ಕೆ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ.
ದಕ್ಷಿಣ ಮೆಕ್ಸಿಕೊದ ಸ್ಯಾನ್ ಪೆಡ್ರೊ ಹುವಾಮೆಲುಲಾ ಈ ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ವಾಸಿಸುವ ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅಲ್ಲಿನ ಸಂಪ್ರದಾಯದಂತೆ ‘ಅಲಿಸಿಯಾ ಆಡ್ರಿಯಾನಾ’ ಹೆಸರಿನ ಹೆಣ್ಣು ಮೊಸಳೆ ಜೊತೆಗೆ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಪೂರ್ವಜರ ಸಾಂಪ್ರದಾಯಿಕ ಆಚರಣೆಯನ್ನು ಪಾಲಿಸಿದ್ದಾರೆ.
ಮದುವೆ ನಡೆಯುವ ಸಂದರ್ಭದಲ್ಲಿ ‘ಕೇಮನ್’ ಪ್ರಭೇದಕ್ಕೆ ಸೇರಿದ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗುತ್ತದೆ. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗುತ್ತದೆ. ಮದುವೆಗೂ ಮುನ್ನ ಪ್ರತಿಯೊಂದು ಮನೆಗೂ ಮೊಸಳೆಯನ್ನು ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. ಬಳಿಕ ವಧುವಿನ ವೇಷದಲ್ಲಿರುವ ಮೊಸಳೆಯನ್ನು ಕೈಯಲ್ಲಿ ಹಿಡಿದುಕೊಂಡು ನೃತ್ಯ ಮಾಡುವ ಮೂಲಕ ಸಂಭ್ರಮಿಸಲಾಗುತ್ತದೆ. ಬಳಿಕ ವರನಾದ ಮೆಕ್ಸಿಕೊ ಮೇಯರ್ ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾನೆ. ಕೊನೆಗೆ ಅದಕ್ಕೆ ಮುತ್ತು ಕೊಟ್ಟು ಅಧಿಕೃತವಾಗಿ ಮದುವೆಯಾಗುತ್ತಾನೆ.
ಮೊಸಳೆ ಮದುವೆಯಾಗುವ ಆಚರಣೆ
230 ವರ್ಷಗಳ ಹಿಂದೆ ಎರಡು ಸ್ಥಳೀಯ ಸಮುದಾಯಗಳ ನಡುವೆ ಕಲಹ ಉಂಟಾಗಿತ್ತು. ಈ ವೇಳೆ ಚೊಂಟಲ್ ಸಮುದಾಯದ ರಾಜನು ಹುವಾವ್ ಸಮುದಾಯಕ್ಕೆ ಸೇರಿದ ರಾಣಿಯನ್ನು ಮದುವೆಯಾಗುತ್ತಾನೆ. ಈ ಮೂಲಕ ಈ ಒಂದು ಕಲಹವು ಅಂತ್ಯವಾಗುತ್ತದೆ. ಇದರ ನೆನಪಿಗೆ ಪ್ರತಿವರ್ಷ ಪುರುಷ ಮತ್ತು ರಾಜಕುಮಾರಿ ಪ್ರತಿನಿಧಿಸುವ ಹೆಣ್ಣು ಮೊಸಳೆಗೆ ಮದುವೆ ಮಾಡಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.