ಮೆಟಾ ಒಡೆತನದ ಟ್ವಿಟ್ಟರ್ ಪ್ರತಿಸ್ಪರ್ಧಿ ಇನ್ಸ್ಟಾಗ್ರಾಮ್ ಥ್ರೆಡ್ಸ್ ಆ್ಯಪ್ ಗುರುವಾರ ಬಿಡುಗಡೆಯಾಗಿದೆ. ಈ ಅಪ್ಲಿಕೇಶನ್ ಟ್ವಿಟರ್ನಂತೆಯೇ ಕಾರ್ಯನಿರ್ವಹಿಸಲಿದ್ದು ಟ್ವಿಟರ್ನ ಪ್ರಬಲ ಪ್ರತಿಸ್ಪರ್ಧಿ ಆಗಿ ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಲಭ್ಯವಿದೆ.
ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬುಧವಾರ ಮಧ್ಯರಾತ್ರಿ ಯುಕೆಯಲ್ಲಿ ಥ್ರೆಡ್ಸ್ ಅಪ್ಲಿಕೇಶನ್ ಲೈವ್ ಮಾಡಲಾಯಿತು. ಇದೀಗ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಇದು ಕಟ್ಟುನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಕೇವಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 2 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರ ಡೌನ್ಲೋಡ್ ಮಾಡಿದ್ದಾರೆ ಎಂದು ದಿ ವರ್ಜ್ ವರದಿಯಲ್ಲಿ ತಿಳಿಸಿದೆ.
ಏನಿದು ಥ್ರೆಡ್ಸ್ ಅಪ್ಲಿಕೇಶನ್?
ಮೆಟಾ ಬಿಡುಗಡೆ ಮಾಡಿರುವ ಈ ಆ್ಯಪ್ ಟ್ವಿಟರ್ನ ಪ್ರತಿಸ್ಪರ್ಧಿ ಆಗಿದ್ದು, ಥ್ರೆಡ್ಸ್ 500 ಅಕ್ಷರಗಳವರೆಗಿನ ಕಿರು ಪೋಸ್ಟ್ಗಳು ಅಥವಾ ಅಪ್ಡೇಟ್ಗಳನ್ನು ಪೋಸ್ಟ್ ಮಾಡಲು ಬಳಕೆದಾರರಿಗೆ ಅವಕಾಶವಿದೆ. ಬಳಕೆದಾರರು 5 ನಿಮಿಷಗಳವರೆಗೆ ಲಿಂಕ್ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್ನಲ್ಲಿ ಸೇರಿಸಬಹುದಾಗಿದೆ. ಹಾಗೆಯೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗೆ ಥ್ರೆಡ್ಸ್ ಪೋಸ್ಟ್ಗಳನ್ನು ಶೇರ್ ಮಾಡಬಹುದಾಗಿದೆ.
ಥ್ರೆಡ್ಸ್ ಆಪ್ ಬಳಕೆ ಹೇಗೆ?
ಮೆಟಾ ಸಂಸ್ಥೆಯ ಹೊಸ ಆ್ಯಪ್ ಆದ ಥ್ರೆಡ್ಸ್ ಆ್ಯಪ್ ಸೇರಲು ಬಳಕೆದಾರರು ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವುದು ಅಗತ್ಯ. ಏಕೆಂದರೆ ಥ್ರೆಡ್ಸ್ ಆ್ಯಪ್ ಗೆ ಸೈನ್ ಇನ್ ಮಾಡಲು ಬಳಕೆದಾರರು ಇನ್ಸ್ಟಾಗ್ರಾಮ್ ಲಾಗಿನ್ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಬೇಕಾಗುತ್ತದೆ. ಬಳಕೆದಾರರು ಒಮ್ಮೆ ಖಾತೆಯನ್ನು ಪ್ರಾರಂಭಿಸಿ, ಇನ್ಸ್ಟಾಗ್ರಾಮ್ ಬಳಕೆದಾರ ಹೆಸರನ್ನು ಪೋರ್ಟ್ ಮಾಡಲಾಗುತ್ತದೆ. ಆದರೆ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಕಸ್ಟ್ಮೈಸ್ ಆಗಿ ರಚಿಸಲು ಅವಕಾಶ ಇದೆ.
ಇನ್ಸ್ಟಾಗ್ರಾಮ್ ನಲ್ಲಿ ಬಳಕದಾರರು ಈಗಾಗಲೇ ಅನುಸರಿಸುವ ಖಾತೆಗಳನ್ನು ಕೆಲವು ಕ್ಲಿಕ್ ಮೂಲಕ ಸುಲಭವಾಗಿ ಫಾಲೋ ಮಾಡಬಹುದು. ಥ್ರೆಡ್ಸ್ನಲ್ಲಿ ಬಳಕೆದಾರರು ಪೋಸ್ಟ್ ಅಥವಾ ‘ಥ್ರೆಡ್’ ಅನ್ನು ಕ್ರಿಯೆಟ್ ಮಾಡಿದಾಗ, ಅದನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಅವರು ಆಯ್ಕೆ ಮಾಡಬಹುದಾಗಿದೆ. ಅದು ಪಬ್ಲಿಕ್ ಅಥವಾ ಫಾಲೋವರ್ಸ್ ಮಾತ್ರ ಆಗಿರಬಹುದು. ಇನ್ನು ಬಳಕೆದಾರರಿಗೆ ಪ್ರೊಫೈಲ್ ರಿಸ್ಟ್ರೀಕ್ ಮಾಡುವ, ರಿಪೋರ್ಟ್ ಮಾಡುವ, ನಿರ್ಬಂಧಿಸುವ ಸಾಮರ್ಥ್ಯ ಆಯ್ಕೆಗಳು ಇರಲಿವೆ. ಮೂರು ಚುಕ್ಕೆಗಳ ಡ್ರಾಪ್-ಡೌನ್ ಮೆನುವನ್ನು ಬಳಸಿಕೊಂಡು ಅದನ್ನು ಆಕ್ಸಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಬ್ಲಾಕ್ ಮಾಡಿರುವ ಖಾತೆಗಳನ್ನು ಆಟೋಮ್ಯಾಟಿಕ್ ಆಗಿ ಥ್ರೆಡ್ಸ್ಗಳಲ್ಲಿಯೂ ಬ್ಲಾಕ್ ಮಾಡಬಹುದಾಗಿದೆ. ಹಾಗೆಯೇ ಈ ಆ್ಯಪ್ ಸ್ಕ್ರೀನ್ ರೀಡರ್ ಸಪೋರ್ಟ್ ಆಯ್ಕೆ ಒಳಗೊಂಡಿದೆ.