ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಅಥವಾ ಡಿಜಿಟಲ್ ವೈಯಕ್ತಿಕ ದಾಖಲೆಗಳ ಸಂರಕ್ಷಣಾ ಮಸೂದೆ 2023 ರ ಕರಡು ಪ್ರತಿಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜುಲೈ 20 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ನ್ನುಕೇಂದ್ರ ಸರ್ಕಾರ 2022ರ ನವೆಂಬರ್ ತಿಂಗಳಲ್ಲಿ ರಚಿಸಿತ್ತು. ಬಳಿಕ ಹಲವು ಸುತ್ತಿನ ಸಾರ್ವಜನಿಕ ಸಮಾಲೋಚನೆ, ಸಲಹೆಗಳಿಗೆ ಅಹ್ವಾನ ನೀಡಲಾಗಿತ್ತು. ಈ ಸಲಹೆ, ಸೂಚನೆ ಹಾಗೂ ಸಚಿವಾಲಯದ ಚರ್ಚೆಗಳ ಬಳಿಕ ಸಿದ್ಧವಾದ ಬಿಲ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2018ರಲ್ಲಿ ಮಂಡಿಸಲಾದ ಡೇಟಾ ಪ್ರೊಟೆಕ್ಷನ್ ಬಿಲ್ ಸಂಕೀರ್ಣವಾಗಿದೆ ಅನ್ನೋ ಕಾರಣಕ್ಕೆ ಹಿಂತೆಗೆದುಕೊಳ್ಳಲಾಗಿತ್ತು. ಬಳಿಕ ಸಂಸತ್ತಿನ ಜಂಟಿ ಸಮಿತಿ ಪರಿಶೀಲನೆ, ಪರಾಮರ್ಶೆಗಳಿಂದ ಕೆಲ ಬದಲಾವಣೆ ಮಾಡಲಾಗಿತ್ತು. ಪ್ರಮುಖವಾಗಿ ಈ ವೈಯುಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, ತಂತ್ರಜ್ಞಾನದ ನಿಯಮಾವಳಿಯಾಗಿದೆ. ಇದು ಡಿಜಿಟಲ್ ಇಂಡಿಯಾ ಮಸೂದೆಯನ್ನು ಒಳಗೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಭಾರತೀಯ ದೂರಸಂಪರ್ಕ ಮಸೂದೆ 2022 ಹಾಗೂ ಡೇಟಾ ಆಡಳಿತ ನೀತಿ ಮಸೂದೆಗಳ ಆಧಾರದಲ್ಲಿ ನೂತನ ಡೇಟಾ ಪ್ರೊಟಕ್ಷನ್ ಬಿಲ್ ಪರಿಷ್ಕರಿಸಲಾಗಿದೆ.
ಏನಿದು ಡೇಟಾ ಪ್ರೊಟೆಕ್ಷನ್ ಬಿಲ್ ?
ದೇಶವಿಂದು ಟಿಜಿಟಲ್ ಯುಗದತ್ತ ಸಾಗುತ್ತಿದ್ದು, ಎಲ್ಲ ವ್ಯವಹಾರ ವಹಿವಾಟುಗಳು ಹೆಚ್ಚಾಗಿ ಡಿಜಿಟಲ್ ಮೂಲಕವೇ ಆಗುತ್ತಿದೆ. ದೇಶದ ಬಹುತೇಕ ನಾಗರಿಕರು ಈಗ ಡಿಜಿಟಲ್ನತ್ತ ಮುಖ ಮಾಡಿರುವುದರಿಂದ ಅವರ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಸಿದ್ಧಪಡಿಸಿರು ಯೋಜನೆಯೇ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟಕ್ಷನ್ ವಿಧೇಯಕ.
ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟಕ್ಷನ್ ವಿಧೇಯಕವು ಜನಸಾಮಾನ್ಯರ ಡೇಟಾ ಸಂರಕ್ಷಣೆಯನ್ನು ಒತ್ತಿ ಹೇಳುತ್ತದೆ. ಡೇಟಾ ಸೋರಿಕೆ, ಡೇಟಾ ದುರ್ಬಳೆಕೆ ತಡೆಯಲು ನೆರವಾಗಲಿದೆ. ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿನ ಖಾತೆಯನ್ನು ಡಿಲೀಟ್ ಮಾಡಿದರೆ, ಆತನ ಎಲ್ಲಾ ವೈಯುಕ್ತಿಕ ಮಾಹಿತಿಯನ್ನು ಅಳಿಸಬೇಕು. ಸಂಗ್ರಹಿಸಿದ ಡೇಟಾವನ್ನು ಬೇರೆ ಉದ್ದೇಶಕಕ್ಕಾಗಿ ಬಳಕೆ ಮಾಡುವುದು ಇದರಿಂದ ತಪ್ಪುತ್ತದೆ.
ದೇಶದ ನಾಗರಿಕರ ಡಿಜಿಟಲ್ ಮಾಹಿತಿ ಸಂಗ್ರಹ ಬಳಕೆದಾರರ ಹಕ್ಕುಗಳು, ಕರ್ತವ್ಯಗಳು ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಅಥವಾ ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿದಂತೆ ಹಲವು ಅಂಶಗಳನ್ನು ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟಕ್ಷನ್ ವಿಧೇಯಕ ಒಳಗೊಂಡಿದೆ.
ಮಸೂದೆ ಡಿಜಿಟಲ್ ಡೇಟಾ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ. ಸ್ಥಳೀಯ ಮಟ್ಟದಲ್ಲೇ ಡೇಟಾ ಸಂಗ್ರಹಣೆ, ಭೌಗೋಳಿಕವಾಗಿ ಡೇಟಾ ನಿರ್ವಹಣೆ ಸೇರಿ ಹಲವು ಕ್ಲಿಷ್ಟಕರ ವಿಷಗಳ ಕುರಿತು ಈ ಮಸೂದೆ ಸ್ಪಷ್ಟ ಚಿತ್ರಣ ನೀಡಲಿದೆ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಈ ಮಸೂದೆ ರಚಿಸಲಾಗಿದೆ.