ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳ ಹೂರಣ: ಇಲ್ಲಿದೆ ಕ್ವಿಕ್ ರೌಂಡ್ ಅಪ್
ರಾಜ್ಯ ಸುದ್ದಿಗಳು
ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಿಸಿದ ಸ್ಪೀಕರ್ ಯು. ಟಿ. ಖಾದರ್
ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಶಾಸಕರಿಗೆ ಸ್ಪೀಕರ್ ಯು ಟಿ ಖಾದರ್ ಘೋಷಣೆ ಮಾಡಿದ್ದಾರೆ.
ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ್ದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಕೌಜಲಗಿ ಮಹಾಂತೇಶ್, ಎಸ್ ಸುರೇಶ್ ಕುಮಾರ್, ಪ್ರದೀಪ್ ಈಶ್ವರ್, ಎಸ್ ಆರ್ ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಶಿವಲಿಂಗೇಗೌಡ ಸೇರಿದಂತೆ ಇತರ ಶಾಸಕರ ಹೆಸರು ಓದಿದ ಸ್ಪೀಕರ್ ಶಾಸಕರ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ: 10 ಕೋಟಿ ರೂ.ಗೆ ಹುದ್ದೆ ಬಿಕರಿ
ಇಂಧನ ಇಲಾಖೆಯಲ್ಲಿ ಹುದ್ದೆಗೆ ತಲಾ 10 ಕೋಟಿ ರೂ. ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ನೇರ ಆರೋಪ ಮಾಡಿದರು.
ಈ ಸರಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಪೂರ್ಣವಾಗಿ ನಿರತವಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿದೆ ಎಂದು ಹೇಳಿ ತಮ್ಮ ಬಳಿ ಮಹತ್ವದ ದಾಖಲೆ ಇದೆ ಎಂದು ಒಂದು ಪೆನ್ ಡ್ರೈವ್ ಪ್ರದರ್ಶಿಸಿದರು.
ನಿನ್ನೆ ಇಂಧನ ಇಲಾಖೆಯಲ್ಲಿ ಎರಡು ವರ್ಗಾವಣೆಗಳು ಆಗಿವೆ. ಆ ಎರಡು ಹುದ್ದೆಗಳನ್ನು ತಲಾ 10 ಕೋಟಿ ರೂ.ಗೆ ಮಾರಿಕೊಳ್ಳಲಾಗಿದೆ. ಅಲ್ಲಿಗೆ ಬಂದು ಕೂತಿರುವ ಆ ಅಧಿಕಾರಿ ಒಂದು ದಿನಕ್ಕೆ 50 ಲಕ್ಷ ಕಮಿಷನ್ ಹೊಡೆಯುತ್ತಾನೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಅಸಹ್ಯಕ್ಕೆ ಸರ್ಕಾರ ಏನು ಉತ್ತರ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದರು.
ದಾಖಲೆ ಜೇಬಿನಲ್ಲೇ ಇದೆ, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇಗೆ ಸ್ಪೀಡ್ ಲಿಮಿಟ್!
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಕ್ಕೆ ಕಡಿವಾಣ ಹಾಕಲು ಸ್ಪೀಡ್ ರೇಡಾರ್ ಗನ್ ಅಳವಡಿಸಲಾಗುತ್ತಿದೆ.
ಈ ಬಗ್ಗೆ ರಾಜ್ಯ ಸಂಚಾರ ವಿಭಾಗದ ಆಯುಕ್ತ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಎಕ್ಸ್ ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಈಗಾಗಲೇ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರತಿ ಗಂಟೆಗೆ ಕನಿಷ್ಠ 80 ಕಿ.ಮೀ. ನಿಂದ ಗರಿಷ್ಠ 100 ಕಿ.ಮೀ ವೇಗದ ಮಿತಿ ವಿಧಿಸಲಾಗಿದ್ದು, ಈ ಬಗ್ಗೆ ಫಲಕಗಳನ್ನು ಹಾಕಲಾಗಿದೆ.
120 ಕಿ. ಮೀ ವೇಗದಲ್ಲಿ ಸಾಗುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿರುವ ಇದನ್ನು ತಡೆಯಲು ಗಂಟೆಗೆ 100 ಕಿ. ಮೀ. ವೇಗವನ್ನು ಮಿತಿಗೊಳಿಸಲಾಗಿದೆ. ಇದನ್ನು ಪಾಲಿಸಲು ಹೆದ್ದಾರಿಯಲ್ಲಿ ಸ್ಪೀಡ್ ರೇಡಾರ್ ಗನ್ ಮತ್ತು ವಾಹನದ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೀಸಲಾತಿ ಕುರಿತ ಗೊಂದಲ ನಿವಾರಣೆಗೆ ಪ್ರತ್ಯೇಕ ಸಭೆ: ಸಿಎಂ ಸಿದ್ದರಾಮಯ್ಯ ಭರವಸೆ
ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಗೊಂದಲಗಳ ನಿವಾರಣೆಗೆ ಬಜೆಟ್ ಅಧಿವೇಶನ ಮುಗಿದ ನಂತರ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಹಾಗೂ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸುತ್ತೇನೆ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು ವಾಲ್ಮೀಕಿ ಸಮಾಜದ ಹಿತ ಕಾಪಾಡಲು ಬದ್ದವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣಪತ್ರ ವಿತರಣೆಯಾಗುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಿ.ಆರ್.ಇ ಸೆಲ್ ನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
ಪರಿಶಿಷ್ಟ ಪಂಗಡಕ್ಕೆ ಸ್ಥಾಪನೆಯಾಗಿರುವ ಪ್ರತ್ಯೇಕ ಸಚಿವಾಲಯಕ್ಕೆ ಕಾರ್ಯದರ್ಶಿ ನೇಮಕಾತಿ ಮಾಡಲಾಗುವುದು. ಬುಡಕಟ್ಟು ಸಲಹಾ ಮಂಡಳಿ ಸ್ಥಾಪನೆ ಬಗ್ಗೆ ವರದಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೀಸಲಾತಿಯನ್ನು ಸಂವಿಧಾನದ 9 ನೇ ಪರಿಚ್ಛೇಧಕ್ಕೆ ಸೇರಿಸಲು ನಮ್ಮ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಅದಕ್ಕೆ ಮೊದಲು ಬಿಜೆಪಿ ಸರ್ಕಾರ ಸೃಷ್ಟಿಸಿದ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು
ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಜತೆಗೆ, ಪ್ರಕರಣವೊಂದರಲ್ಲಿ ಪತ್ನಿಗೆ ಪತಿ ನೀಡಬೇಕಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 10 ಸಾವಿರ ರೂ.ಯಿಂದ 5 ಸಾವಿರ ರೂ.ಗಳಿಗೆ ಕಡಿಮೆ ಮಾಡಿದ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ ಪತ್ನಿ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳಿಲ್ಲ. ಆಲಸ್ಯದಿಂದ ಮನೆಯಲ್ಲಿಯೇ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವುದು ಸಮಂಜಸವಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು. ಪೂರಕ ಜೀವನಾಂಶವನ್ನಷ್ಟೇ ಪತಿಯಿಂದ ಪತ್ನಿ ಕೇಳಬಹುದು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಾಷ್ಟ್ರೀಯ ಸುದ್ದಿಗಳು
ನಾಗಾಲ್ಯಾಂಡ್ ನಲ್ಲಿ ಭಾರಿ ಮಳೆ, ಭೂಕುಸಿತ
ನಾಗಾಲ್ಯಾಂಡ್ ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ, ಪರಿಣಾಮ ಭೂಕುಸಿತ ಉಂಟಾಗಿದೆ.
ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಹತ್ತಾರು ಜನ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ಚುಮುಕೆಡಿಮಾದಲ್ಲಿ ಭೂಕುಸಿತದಿಂದಾಗಿ ಗುಡ್ಡದಿಂದ ಬೃಹತ್ ಬಂಡೆ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಕಾರುಗಳ ಮೇಲೆ ಬಿದ್ದಿದ್ದು, ಕಾರುಗಳು ನಜ್ಜುಗುಜ್ಜಾಗಿದೆ.
ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಮತ್ತು ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಮತ್ತು ಸಹಾಯವನ್ನು ಒದಗಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
24 ಗಂಟೆಯೊಳಗೆ ಸಿಡಿಲು ಬಡಿದು 23 ಮಂದಿ ಸಾವು
ಬಿಹಾರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 23 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರೀ ಮಳೆ, ಗುಡುಗು, ಮಿಂಚು ಪ್ರವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿರುವುದು ಅತ್ಯಧಿಕವಾಗಿದೆ. ಇದಲ್ಲದೇ, ಜಹಾನಾಬಾದ್, ಬಕ್ಸಾರ್ ಮತ್ತು ಜಮುಯಿಯಲ್ಲಿ ತಲಾ ಮೂರು, ಗಯಾ, ಬಂಕಾ ಮತ್ತು ಭಾಗಲ್ಪುರದಲ್ಲಿ ತಲಾ ಎರಡು, ಔರಂಗಾಬಾದ್ ಮತ್ತು ಕತಿಹಾರ್ನಲ್ಲಿ ತಲಾ ಒಂದು ಸಾವು ಆಗಿದೆ.
ಘಟನೆಗೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಪ್ರತಿ ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಜಿ20 ಶೃಂಗಸಭೆ ಹಿನ್ನೆಲೆ: ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ವ್ಯಾಪ್ತಿಯಲ್ಲಿ ಡ್ರೋನ್, ಏರ್ ಕ್ರಾಫ್ಟ್ ಹಾರಾಟ ನಿಷೇಧ
ನಗರದಲ್ಲಿ ಜುಲೈ 6 ಮತ್ತು 7 ರಂದು ಜಿ20 ಶೃಂಗಸಭೆ 2023 ನಡೆಯಲಿದೆ. ಅದರಂತೆ ಸಭೆಯಲ್ಲಿ ಭಾಗಿಯಾಗುವ ವಿದೇಶಿ ಪ್ರತಿನಿಧಿಗಳು, ವಿವಿಐಪಿಗಳು ಜುಲೈ 5ರಿಂದ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ತಂಗಲಿರುವ ಹಿನ್ನೆಲೆ ಅಂದಿನಿಂದ ಹೊಟೇಲ್ ನ 1 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾಗೂ ಏರ್ಕ್ರಾಫ್ಟ್ ಹಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ಜು.6 ಮತ್ತು 7ರಂದು ತಾಜ್ ವೆಸ್ಟೆಂಡ್ ಹೋಟೆಲ್ ಸುತ್ತಮುತ್ತ ಬಂದೋಬಸ್ತ್ ಕೈಗೊಳ್ಳಲಾಗುತ್ತಿದ್ದು, ಓರ್ವ ಡಿಸಿಪಿ, ನಾಲ್ವರು ಎಸಿಪಿ, 11 ಇನ್ಸ್ಪೆಕ್ಟರ್, 32 ಪಿಎಸ್ಐ, 190 ಹೆಚ್ಸಿ, 40 ಪಿಸಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ.
ಜಿ20 ಶೃಂಗಸಭೆಗೆ ಸೆಪ್ಟೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿದ್ದು, ಕರ್ನಾಟಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ ಶೃಂಗಸಭೆ ನಡೆಯಲಿದೆ. ಜುಲೈ 6 ಮತ್ತು 7 ರಂದು ಬೆಂಗಳೂರಿನಲ್ಲಿ, ಜುಲೈ 9-16ರ ವರೆಗೆ ಹಂಪಿಯಲ್ಲಿ, ಆಗಸ್ಟ್ 1 ರಿಂದ 2 ರವರೆಗೆ ಮೈಸೂರಿನಲ್ಲಿ, ಆಗಸ್ಟ್ 16ರಿಂದ 19ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳು
ಅಮೆರಿಕದ ಶ್ವೇತ ಭವನದಲ್ಲಿ ಕೊಕೇನ್ ಪತ್ತೆ!
ಅಮೆರಿಕದ ಶ್ವೇತಭವನದಲ್ಲಿ ಅನುಮಾನಾಸ್ಪದ ಬಿಳಿ ಬಣ್ಣದ ವಸ್ತು ಪತ್ತೆಯಾಗಿದ್ದು, ಇದೀಗ ಆ ವಸ್ತುವನ್ನು ಕೊಕೇನ್ ಎಂದು ಗುರುತಿಸಲಾಗಿದೆ. ಈ ಕುರಿತಾಗಿ ತನಿಖೆಗೆ ಆದೇಶಿಸಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರಾಂತ್ಯದ ಹಿನ್ನೆಲೆ ಕ್ಯಾಂಪ್ ಡೇವಿನ್ ಗೆ ತೆರಳಿದ್ದು, ಈ ವೇಳೆ ಶ್ವೇತ ಭವನದ ವೆಸ್ಟ್ ವಿಂಗ್ ನ ಸಾರ್ವಜನಿಕವಾಗಿ ಪ್ರವೇಶಿಬಹುದಾದ ಪ್ರದೇಶದಲ್ಲಿ ಈ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.
ಕೂಡಲೆ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ವಸ್ತುವನ್ನು ಪರೀಕ್ಷಿಸಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಕೊಕೇನ್ ಎಂಬುದು ತಿಳಿದುಬಂದಿದೆ.
ಚೀನಾದಲ್ಲಿ ಭಾರೀ ಮಳೆ; 15 ಜನರ ಸಾವು
ಚೀನಾದಲ್ಲಿ ಸುರಿಯುತ್ತಿರುವ ಮಳೆಗೆ ಇಡಿಯ ಚೀನಾ ತತ್ತರಿಸಿದ್ದು, ಈವರೆಗೂ 15 ಮಂದಿ ಮೃತಪಟ್ಟಿದ್ದಾರೆ.
ನೈರುತ್ಯ ಚೀನಾದಲ್ಲಿ ಭಾರೀ ಮಳೆಗೆ 15 ಮಂದಿ ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.
ಸಿಚುವಾನ್ ನಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಲ್ಕು ಲಕ್ಷ್ಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 85 ಸಾವಿರ ಹೆಚ್ಚಿನ ಜನರನ್ನು ಸ್ಥಳಾಂತರಿಸಲಾಗಿದೆ.