ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿರುವ ‘ಆ್ಯನಿಮಲ್’ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದ್ದು, ಚಿತ್ರತಂಡದಿಂದ ಹೊಸ ರಿಲೀಸ್ ಡೇಟ್ ಘೋಷಣೆ ಆಗಿದೆ.
ಈ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಮಾಹಿತಿ ಹಂಚಿಕೊಂಡಿದ್ದು, ಡಿಸೆಂಬರ್ 1ರಂದು ‘ಆ್ಯನಿಮಲ್’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಆಗಸ್ಟ್ 11ರಂದು ‘ಆ್ಯನಿಮಲ್’ ಬಿಡುಗಡೆ ಆಗಲಿದೆ ಎಂದು ಈ ಮೊದಲು ಘೋಷಿಸಲಾಗಿತ್ತು. ಆಗಸ್ಟ್ 11ಕ್ಕೆ ‘ಆ್ಯನಿಮಲ್’ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಇತ್ತೀಚೆಗೆ ಹೊರಬಿತ್ತು. ನಿರ್ದೇಶಕರ ಈ ನಿರ್ಧಾರದ ಹಿಂದೆ ಒಂದು ಒಳ್ಳೆಯ ಕಾರಣ ಇದೆ. ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ಸಂದೀಪ್ ರೆಡ್ಡಿ ವಂಗಾ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆ್ಯನಿಮಲ್ ಪ್ಯಾನ್ ಇಂಡಿಯಾ ಸಿನಿಮಾ:
ಆ್ಯನಿಮಲ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಸಿನಿಮಾ ವಾಗಿದ್ದು, ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಇನ್ನೂ ಅನೇಕ ಘಟಾನುಘಟಿ ಕಲಾವಿದರು ಕೂಡ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಮುಂತಾದವರು ಬಣ್ಣ ಹಚ್ಚಿದ್ದಾರೆ.