ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ಒಟ್ಟು ಎಂಟು ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇರಾನ್ ಕೂಡ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆಗೊಳಿಸಲಾಗುತ್ತಿದೆ.
ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿದ ಭಾರತ:
1996ರಲ್ಲಿ ರೂಪುಗೊಂಡ ಶಾಂಘೈ ಸಹಕಾರ ಒಕ್ಕೂಟ ರೂಪಗೊಂಡಿತು. 2005ರಿಂದ ಶಾಂಘೈ ಸಹಕಾರ ಒಕ್ಕೂಟ ಸದಸ್ಯತ್ವಕ್ಕಾಗಿ ಭಾರತ ಕಾತರಿಸುತ್ತಿತ್ತು. ಇದಕ್ಕೆ ಶಾಂಘೈ ಸಹಕಾರ ಒಕ್ಕೂಟ ಸದಸ್ಯ ರಾಷ್ಟ್ರಗಳ ಬೆಂಬಲದ ಅತ್ಯಗತ್ಯವಿತ್ತು. ಆದರೆ, ಆ ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ ಭಾರತವು ಆ ಸದಸ್ಯ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿರಲಿಲ್ಲ. ನಂತರ 2017ರಲ್ಲಿ ಭಾರತ ಪೂರ್ಣ ಸದಸ್ಯತ್ವವನ್ನು ಪಡೆಯಿತು. ಇದೀಗ ಭಾರತ ಮೊದಲ ಬಾರಿಗೆ ಶಾಂಘೈ ಸಹಕಾರ ಒಕ್ಕೂಟ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದೆ.
ಶಾಂಘೈ ಸಹಕಾರ ಒಕ್ಕೂಟದಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕ ನಂತರ ಯುರೇಷಿಯನ್ ಅಂದರೆ ಯೂರೋಪ್ ಹಾಗೂ ಏಷ್ಯಾ ಎರಡೂ ಖಂಡಗಳಲ್ಲಿ ಭಾರತದ ವರ್ಚಸ್ಸು ಹೆಚ್ಚುತ್ತಿದೆ. ಸದಸ್ಯ ರಾಷ್ಟ್ರಗಳ ಸಹಕಾರ, ಭಯೋತ್ಪಾದನೆಯ ನಿಗ್ರಹ, ಗಡಿ ಪ್ರದೇಶಗಳಲ್ಲಿ ಸ್ಥಿರತೆ ಕಾಪಾಡುವುದು ಮುಂತಾದ ವಿಚಾರಗಳಲ್ಲಿ ಭಾರತದ ಮಾತಿಗೆ ಸಂಘಟನೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಮಹತ್ವ ಸಿಗುತ್ತಿದೆ.
ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವಾಗಿ ಇರಾನ್ ಸೇರ್ಪಡೆ:
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಇನ್ನು 1996ರಲ್ಲಿ ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ಚೀನಾ ಹಾಗೂ ಉಜ್ಬೇಕಿಸ್ತಾನಗಳು ಈ ಒಕ್ಕೂಟದ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿದ್ದವು. ಆದರೆ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಪರಿವೀಕ್ಷಕ ಸದಸ್ಯ ರಾಷ್ಟ್ರಗಳಾಗಿದ್ದವು. ಈಗ ಈ ಎರಡೂ ರಾಷ್ಟ್ರಗಳಿಗೆ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿದೆ.
ಈಗ ಒಕ್ಕೂಟಕ್ಕೆ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ.