ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಬ್ರಿಟಿಷರು ಬಿಟ್ಟು ಹೋದ ಭಾರತ ನಾವು ಈಗ ನೋಡುತ್ತಿರುವ ಸ್ವರೂಪದಲ್ಲಿರಲಿಲ್ಲ. ಭಾರತದ ಹೃದಯಭಾಗದಲ್ಲಿ, ಮಸ್ತಿಷ್ಕದಲ್ಲಿ, ಕೈ-ಕಾಲು ಹೊಟ್ಟೆ-ಬೆನ್ನುಗಳಲ್ಲಿ ಐನೂರಕ್ಕೂ ಹೆಚ್ಚು ಸ್ವತಂತ್ರವಾದ ಪುಟ್ಟ ಪುಟ್ಟ ಸಂಸ್ಥಾನಗಳಿದ್ದವು. ಅವು ತಮ್ಮಷ್ಟಕ್ಕೆ ತಾವೇ ಸ್ವತಂತ್ರವೆಂದುಕೊಂಡು ರಾಜಾಡಳಿತಕ್ಕೆ ಒಳಪಟ್ಟಿದ್ದವು. ನಮಗೆ ಇತ್ತಿತ್ತಲಾಗಿ ಗೊತ್ತಾಗಿರುವುದು ಹೈದರಾಬಾದ್ ಸಂಸ್ಥಾನದ ಬಗ್ಗೆ ಮಾತ್ರ ಒಂದಿಷ್ಟು ಮಾಹಿತಿ. ಎಲ್ಲೋ ಓದಿ ಮರೆತ ರಜಾಕರ ಲೂಟಿ, ಹಾವಳಿ. ಆದರೆ ಇಂಥ ಎಲ್ಲ ಸಂಸ್ಥಾನಗಳ ಸಂಸ್ಥಾನಿಕರ ಮನವೊಲಿಸಿ, ಒಪ್ಪದಿದ್ದರೆ ಬಗ್ಗಿಸಿ ಅವರನ್ನೆಲ್ಲ ಏಕತ್ರಿತಗೊಳಿಸಿ ಭಾರತದಲ್ಲಿ ವಿಲೀನಗೊಳಿಸುವ ಬಹು ಕಷ್ಟಕರ ಮತ್ತು ಕ್ಲಿಷ್ಟವಾದ ಮಹಾನ್ ಕಾರ್ಯವನ್ನು ಪಟೇಲರು ಮಾಡಿರುವುದರಿಂದ ಇವತ್ತು ನಾವು ನೋಡುತ್ತಿರುವ ಅಖಂಡ ಭಾರತದ ಚಿತ್ರಣವು ಹೀಗೆ ಇದೆ. ಇಲ್ಲವಾಗಿದ್ದರೆ ಇಲ್ಲೇ ಪಕ್ಕದ ಸಂಸ್ಥಾನಿಕ ಊರಿಗೆ ಹೋಗಲು ನಾವೆಲ್ಲ ಪಾಸಪೋರ್ಟ್, ವೀಸಾ ತೆಗೆದುಕೊಳ್ಳುವ ಪಾಳಿ ಬರುತ್ತಿತ್ತೇನೋ! ಸರ್ದಾರರ ಅವಿರತ ಪ್ರಯತ್ನದಿಂದ ನಮ್ಮ ದೇಶ ಅವಿಚ್ಛಿನ್ನವಾಗಿ ಉಳಿಯಿತು. ಅಂಥ ಉಕ್ಕಿನ ಮನುಷ್ಯ ಸಾಧಿಸಿದ ಏಕತೆಯ ನೆನಪಿಗಾಗಿ ನಿರ್ಮಾಣಗೊಂಡಿರುವ ಏಕತಾ ಪ್ರತಿಮೆಯು ೨೦೧೮ರಲ್ಲಿ ಪಟೇಲರ ೧೪೩ನೇ ಜನ್ಮದಿನದಂದು ಲೋಕಾರ್ಪಣೆಗೊಂಡು ಸಾರ್ವಜನಿಕ ವೀಕ್ಷಣೆಗಾಗಿ ತೆರೆಯಲ್ಪಟ್ಟಿತು. ಗುಜರಾತನ ಕೇವಡಿಯಾ ಎಂಬ ಊರಿಗೆ ಅತ್ಯಂತ ಸಮೀಪದಲ್ಲಿರುವ ಈ ಮೂರ್ತಿಯು ೧೮೨ ಮೀಟರ್ ಎತ್ತರವಿದ್ದು ಜಗತ್ತಿನ ಅತಿ ಎತ್ತರದ ಪ್ರತಿಮೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂರ್ತಿ ರಚನೆಯ ಪರಿಕಲ್ಪನೆಯನ್ನು ಪದ್ಮ ಭೂಷಣ ಪ್ರಶಸ್ತಿ ವಿಜೇತ ಶ್ರೀ. ರಾಮ. ಸುತಾರ ತಯಾರಿಸಿದ್ದು ನಿರ್ಮಾಣಕಾರ್ಯದ ಹೊಣೆಯನ್ನು ಲಾರ್ಸನ್ & ಟೋಬ್ರೋ ಕಂಪನಿಯು ವಹಿಸಿಕೊಂಡಿತ್ತು. ಸಧ್ಯ ಮೂರ್ತಿಯ ನಿರ್ವಹಣೆಯನ್ನೂ ಅದೇ ಕಂಪನಿ ನೋಡಿಕೊಳ್ಳುತ್ತದೆ. ಪ್ರತಿಮೆಯಲ್ಲಿ ಒಟ್ಟು ಐದು ಮಜಲುಗಳಿದ್ದು ಮೊದಲಿನ ಮಜಲಿನಲ್ಲಿ ಗಾರ್ಡನ್ ಮತ್ತು ಮ್ಯೂಸಿಯಂ ಇವೆ. ಎರಡನೇಯ ಮತ್ತು ಮೂರನೇ ಮಜಲಿನ ಗ್ಯಾಲರಿಯಿಂದ ನರ್ಮದಾ ನದಿ, ಡ್ಯಾಮ್, ಸಾತಪುಡಾ ಮತ್ತು ವಿಂಧ್ಯಾಚಲ ಪರ್ವತಶ್ರೇಣಿಗಳನ್ನು ವೀಕ್ಷಿಸಬಹುದು. ನಾಲ್ಕು ಮತ್ತು ಐದನೇ ಮಜಲುಗಳು ಪ್ರತಿಮೆಯ ನಿರ್ವಹಣೆಗಾಗಿ ಮೀಸಲಿವೆ. ನೂರಾರು ಪುಷ್ಪಗಳು ನಳನಳಿಸುವ ಸುಂದರವಾದ ಗಾರ್ಡನ್ ಮಧ್ಯೆ ತಲೆ ಎತ್ತಿ, ಹೆಗಲ ಮೇಲೆ ಶಾಲು ಹೊದೆದು ನಡೆಯಲು ಸಜ್ಜಾಗಿ ನಿಂತಿರುವಂತೆ ಕಾಣುವ ಸರ್ದಾರರ ಧೀರ-ಗಂಭೀರ ನಿಲುವು ದೇಶದ ಹೆಮ್ಮೆಯ ಪ್ರತೀಕವಾಗಿದೆ. ಸಮೀಪದ ದೊಡ್ಡ ಶಹರ ವಡೋದರ ಸುಮಾರು ೧೦೦ ಕಿ.ಮಿ. ದೂರದಲ್ಲಿದೆ. ದೇಶದ ಪ್ರೇಕ್ಷಣೀಯ ಸ್ಥಳವಾಗಿ ಸಾಕಷ್ಟು ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿ ಅನೇಕ ಖಾದ್ಯ ಮಳಿಗೆಗಳು, ಆದಿವಾಸಿಗಳಿಂದ ನಿರ್ಮಿತವಾದ ಅನೇಕ ಶಿಲ್ಪ ಕಲೆಗಳ ಮಾರಾಟದ ಮಳಿಗೆಯನ್ನು ಸಹ ಕಾಣಬಹುದು.
ದೇಶದ ವಿವಿಧ ಭಾಷೆಯಲ್ಲಿ ಏಕತಾ ಪ್ರತಿಮೆ ಎಂದು ಬರೆದಿರುವ ಲೇಖನವನ್ನು ಅಲ್ಲಲ್ಲಿ ಕಾಣುತ್ತೆವೆ. ಪ್ರತಿಮೆಯಿಂದ ಆರಂಭದ ಗೇಟ್ ಸುಮಾರು ೧ಕಿ.ಮಿ ದೂರವಿದ್ದು ಸ್ವಯಂಚಾಲಿತ ಮೆಟ್ಟಲನ್ನು ಅಳವಡಿಸಲಾಗಿದೆ. ಪ್ರತಿಮೆಯ ಒಳಗೆ ಲಿಫ್ಟ್ ವ್ಯವಸ್ಥೆಯಿದ್ದು ಅದನ್ನು ಪಡೆಯಲು ಮುಂಗಡ ಟಿಕೆಟ್ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಆ ಲಿಫ್ಟ್ ನಮ್ಮನ್ನು ಪಟೇಲರ ಹೃದಯದ ವರೆಗೆ ತಂದು ನಿಲ್ಲಿಸುತ್ತದೆ. ಒಂದರ್ಥದಲ್ಲಿ ಈ ದೇಶವನ್ನು ಕಟ್ಟಿದ ಪಟೇಲರ ಹೃದಯದಿಂದ ನಾವು ನಮ್ಮ ದೇಶವನ್ನು ನೋಡುತ್ತಿದ್ದೆವೆ ಎಂಬ ಭಾವನೆ ಬರುವುದು ಸಹಜವಾಗಿದೆ. ಮುಂದೆ ಕಾಣುವ ಸರ್ದಾರ ಸರೋವರ ಡ್ಯಾಂ ಸುತ್ತಲಿನ ಬೆಟ್ಟ ಗುಡ್ಡಗಳು ಎಲ್ಲರನ್ನು ಆಕರ್ಷಿಸುತ್ತವೆ.
ಪ್ರತಿಮೆಯ ಅಡಿಯಲ್ಲಿ ಡ್ಯಾಂ ಮತ್ತು ಕಟ್ಟಡ ಹಾಗೂ ಭಾರತದ ಏಕೀಕರಣಕ್ಕೆ ಪಟೇಲರ ಕೊಡುಗೆಯನ್ನು ಬಿತ್ತರಿಸುವ AV ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೂ ಹೆಚ್ಚಿನ ಆನಂದವನ್ನು ಪಡೆಯಲು ಹೆಲಿಕ್ಯಾಪ್ಟರ್ ವಿಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದಾರೆ ಮತ್ತು ಸಾಯಂಕಾಲ ಲೇಝರ್ ಶೋ ಕಾರ್ಯಕ್ರಮವಿದೆ.ವಡೋದರಾದಿಂದ ಬೆಳಗ್ಗೆ ಹವಾನಿಯಂತ್ರಣ ಬಸ್ ವ್ಯವಸ್ಥೆಯನ್ನು ಸರ್ಕಾರವೇ ಮಾಡಿದೆ. ಇದನ್ನು ಹೊರತು ಪಡಿಸಿ ಖಾಸಗಿ ವಾಹನಗಳನ್ನು ಸಹ ಬಳಿಸಿಕೊಳ್ಳ ಬಹುದು. ಗುಜರಾತ ರಾಜ್ಯವೇ ಪ್ರವಾಸಿಗರಿಗೆ ಅತ್ಯಂತ ಪ್ರಿಯವಾದ ರಾಜ್ಯವಾಗಿದೆ.ಇಂತಹ ಅನೇಕ ಪ್ರವಾಸಿ ಸ್ಥಳಗಳನ್ನು ಗುಜರಾತನಲ್ಲಿ ಕಾಣಬಹುದು ಅದರಲ್ಲಿ ಕೇವಡಿಯಾದ ಏಕತಾ ಪ್ರತಿಮೆಯು ಒಂದು