ಎಸ್ಎಸ್ಎಲ್ಸಿ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇಲ್ಲಿ ವಿದ್ಯಾರ್ಥಿಗಳು ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವುದು ಉತ್ತಮ. ಈ ನಿಟ್ಟಿನಲ್ಲಿ ಎಸ್ಸೆಸೆಲ್ಸಿ ನಂತರ ಏನು ಮಾಡಬಹುದು ವಿದ್ಯಾರ್ಥಿಗಳ ಮುಂದಿರುವ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ.
ವಿಜ್ಞಾನ ವಿಭಾಗ:
ವೈದ್ಯಕೀಯ ಹಾಗೂ ವೃತ್ತಿಪರ ಕೋರ್ಸ್ಗಳಲ್ಲಿ ಮುಂದುವರೆಯುವ ಆಸಕ್ತಿ ಇರುವ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಿಭಾಗಗಳು:
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ(ಪಿಸಿಎಂಬಿ)
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್(ಪಿಸಿಎಂಇ)
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಇಲೆಕ್ಟ್ರಾನಿಕ್ಸ್(ಪಿಸಿಎಂಇ)
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಸ್ಟಾಟಿಸ್ಟಿಕ್ಸ್(ಪಿಸಿಎಂಎಸ್)
ಪಿಯುಸಿಯಲ್ಲಿ ವಿಜ್ಞಾನ ಓದಿದರೆ ನೀಟ್ , ಎನ್ಡಿಎ ಮೊದಲಾದ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರೆ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಓದಲು ಅವಕಾಶ ಪಡೆಯಬಹುದು ಇಲ್ಲವೇ ಬಿಸಿಎ, ಐಟಿ ಮತ್ತು ಸಾಫ್ಟ್ವೇರ್, ಫಾರ್ಮಸಿ, ಆಂಥ್ರಪಾಲಜಿ , ಆಕ್ಯುಪೇಶನಲ್ ಥೆರಫಿ, ಫಿಸಿಯೋಥೆರಪಿ, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಎಕಾಮಿಕ್ಸ್, ಜುಲಾಲಜಿ, ಬಯೋಟೆಕ್ನಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್ ಡಿಗ್ರಿ ಕೋರ್ಸ್ಗಳನ್ನು ಓದಬಹುದು.
ಮೆಡಿಕಲ್ ಕೋರ್ಸ್ಗಳಲ್ಲಿ ಆಸಕ್ತಿ ಉಳ್ಳವರು ವಿಜ್ಞಾನ ಪಿಯುಸಿ ಓದಿದವರು ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಇಎಂಎಸ್, ಹೋಮಿಯೋಪತಿ, ಯುನಾನಿ ಮತ್ತು ಇತರೆ ವೈದ್ಯಕೀಯ ಕೋರ್ಸ್ಗಳನ್ನು ಓದಬಹುದು. ಇಂಜಿನಿಯರಿಂಗ್ ಆದರೆ ಸಿವಿಲ್, ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮತ್ತು ಇತರೆ ವಿಭಾಗಗಳಲ್ಲಿ ಬಿಇ, ಬಿಟೆಕ್ ಹಾಗೂ ಬಿ ಆರ್ಚ್ ಅಧ್ಯಯನ ಮಾಡಬಹುದು.
ಕಲಾ ವಿಭಾಗ:
ಕಲೆ- ಭಾಷಾ ವಿಷಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಪಿಯುಸಿ ಅಲ್ಲಿ ಆರ್ಟ್ಸ್ ಸ್ಟ್ರೀಮ್ (ಕಲಾ ವಿಭಾಗ) ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಹಲವಾರು ಅವಕಾಶಗಳು ಸಿಗಲಿವೆ. ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರೆಯಲು ಬಯಸುವವರು ಕಲಾ ವಿಭಾಗಕ್ಕೆ ಸೇರಿಕೊಳ್ಳಬಹುದು.
ಕಲಾವಿಭಾಗದಲ್ಲಿ ಪಿಯುಸಿ ಮುಗಿದ ಬಳಿಕ ಪತ್ರಿಕೋದ್ಯಮ. ಪ್ರವಾಸೋದ್ಯಮ, ರಾಜ್ಯಶಾಸ್ತ್ರ, ಡಿಸೈನಿಂಕ್, ಭೊಗೋಳಶಾಸ್ತ್ರ ಮೊದಲಾದ ವಿಷಯಗಳಲ್ಲಿ ಉನ್ನತ ವ್ಯಾಸಾಂಗ ಮಾಡಬಹುದು.
ವಾಣಿಜ್ಯವಿಭಾಗ:
ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್ ಅಕೌಂಟೆಂಟ್ ಕ್ಷೇತ್ರ ಹಾಗೂ ಶಿಕ್ಷಕರು, ಪ್ರಾಧ್ಯಾಪಕರು ಹೀಗೆ ಹಲವು ಕ್ಷೇತ್ರಗಳಲ್ಲಿ ಮುಂದುವರೆಯುವುದಕ್ಕೆ ಅವಕಾಶವಿರುತ್ತದೆ. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇರುವವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಾಲಿಟೆಕ್ನಿಕ್ ಡಿಪ್ಲೋಮಾ:
ಇಂಜಿನಿಯರ್ ಆಗುವ ಆಸೆ ಹೊಂದಿರುವವರು ಪಾಲಿಟೆಕ್ನಿಕ್ ಡಿಪ್ಲೋಮಾ ಕೋರ್ಸ್ನ್ನು ಮಾಡಬಹುದು.
ಡಿಪ್ಲೋಮಾ ಕೋರ್ಸ್ಗಳು:
ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್
ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿಂಗ್
ಡಿಪ್ಲೋಮಾ ಇನ್ ಫಾರ್ಮಸಿ
ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಮಿಡ್ವೈಫರಿ
ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನಿಂಗ್
ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೆಕಿಂಗ್
ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
ಹೀಗೆ ಹಲವು ಆಯ್ಕೆಗಳಿವೆ ಈ ರೀತಿ ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳು ಇಂಜಿನಿಯರಿಂಗ್ನಲ್ಲಿ ಎರಡನೇ ವರ್ಷಕ್ಕೆ ಲ್ಯಾಟರಲ್ ಎಂಟ್ರಿ ಪಡೆದುಕೊಳ್ಳಬಹದುದ ಬಿ.ಇ ಮುಗಿದ ಬಳಿಕ ಬಿ.ಟೆಕ್ ಮಾಡಬಹುದು.
ಐಟಿಐ ಕೋರ್ಸ್:
ಎಸ್ಎಸ್ಎಲ್ಸಿ ಬಳಿಕ ಐಟಿಐ ಕೋರ್ಸ್ನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಒಂದರಿಂದ ಎರಡು ವರ್ಷದ ಕಾಲ ಅಧ್ಯಯನ ನಡೆಸಬೇಕು.
ಐಟಿಐ ಇಲೆಕ್ಟಿಶಿಯನ್
ಐಟಿಐ ಪ್ಲಂಬರ್
ಐಟಿಐ ವೆಲ್ಡರ್
ಐಟಿಐ ಮೆಕ್ಯಾನಿಸ್ಟ್
ಐಟಿಐ ಲ್ಯಾಬೊರೇಟರಿ ಅಸಿಸ್ಟೆಂಟ್ ಹೀಗೆ ಕೆಲವು ಆಯ್ಕೆಗಳು ಲಭ್ಯವಿದೆ.
ಹಾಗೆಯೇ ಜಾಬ್ ಓರಿಯೆಂಟೆಡ್ ಕೋರ್ಸ್ಗಳು ಲಭ್ಯವಿರುತ್ತದೆ. ಅಷ್ಟೇ ಅಲ್ಲದೇ ಎಸ್ಎಸ್ಎಲ್ಸಿ ಮುಗಿದ ಬಳಿಕ ಹಲವಾರು ಸರ್ಕಾರಿ ಕೆಳಹಂತದ ಉದ್ಯೋಗಗಳನ್ನು ಕೂಡ ಪಡೆಯಬಹುದು. ಎಸ್ಎಸ್ಎಲ್ಸಿ ನಂತರ ಬಹಳ ಮುಖ್ಯವಾದ ಹಂತವಾಗಿರುವುದರಿಂದ ಪೋಷಕರೊಂದಿಗೆ ಚರ್ಚಿಸಿ ನಿಮ್ಮ ಇಚ್ಚೆಗೆ ಅನುಗುಣವಾಗಿ ಕೋರ್ಸ್ನ್ನು ಆಯ್ದುಕೊಳ್ಳಿ.