ಇತ್ತೀಚಿಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರ ಹೇಳಿಕೆ ಎಲ್ಲರಿಗೂ ವಿಭಿನ್ನ ಅಭಿಪ್ರಾಯ ಮೂಡುವಂತೆ ಮಾಡಿದೆ.
ನೂತನ ಶಾಸಕರ ತರಬೇತಿ ಕಾರ್ಯಗಾರದಲ್ಲಿ ಮುಂದಿನ ಆಕಾಂಕ್ಷಿ ರಾಜಕಾರಣಿಗಳು ರಾಜಕೀಯ ಕೋರ್ಸ್ ಮಾಡುವುದು ಅತ್ಯಗತ್ಯ ಎಂದಿದ್ದು, ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಆಕಾಂಕ್ಷಿ ರಾಜಕಾರಣಿಗಳಿಗೆ ಅಂತಹ ತರಬೇತಿ ಬೇಕೋ ಬೇಡವೋ ಎಂಬುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಒಬ್ಬ ವ್ಯಕ್ತಿ ರಾಜಕೀಯದ ಬಗ್ಗೆ ಅಧ್ಯಯನ ಮಾಡಬೇಕಾದರೆ ಅದರಲ್ಲಿ ಏನು ಕಲಿಯಬೇಕು ಮತ್ತು ಶೈಕ್ಷಣಿಕ ಚೌಕಟ್ಟು ಏನಿರಬೇಕು? ಎಂಬುದರ ಬಗ್ಗೆ ಚರ್ಚೆಗಳು ಶುರುವಾಗಿವೆ.
1982ರಲ್ಲಿ ಮಹಾರಾಷ್ಟ್ರದ ರಾಮ್ ಭಾವು ಮಾಲ್ಗಿ ಪ್ರಭೋದಿನಿ ಅವರು ಚುನಾಯಿತ ನಾಯಕರಿಗೆ ತರಬೇತಿ ನೀಡುತ್ತಿದ್ದರು. ಅದೇ ರೀತಿ ಹಲವು ಕಾರ್ಪೊರೇಟ್ ಸಂಸ್ಥೆಗಳು ನಾಯಕತ್ವ ಹಾಗೂ ಮ್ಯಾನೇಜ್ಮೆಂಟ್ ನ ತರಬೇತಿಗಳನ್ನು ನೀಡುತ್ತಿವೆ.
ಇನ್ನು ಒಬ್ಬ ರಾಜಕಾರಣಿ ಏನು ಕಲಿಯಬೇಕು? ಸಾರ್ವಜನಿಕರ ಪ್ರತಿನಿಧಿಯಾಗಿರುವ ಓರ್ವ ರಾಜಕಾರಣಿಗೆ ನಾಯಕತ್ವ ಎಂಬುದು ಪ್ರಮುಖ ಗುಣವಾಗಿದೆ. ಇದರ ಹೊರತಾಗಿ ಸಾರ್ವಜನಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಓಬ್ಬ ವ್ಯಕ್ತಿ ತಿಳಿದಿರಬೇಕಾದ ಅತ್ಯಂತ ಅವಶ್ಯಕವಾದ ವಿಷಯವಾಗಿದ್ದು, ಸುಸ್ಥಿರ ಅಭಿವೃದ್ಧಿ ಮಾದರಿಗಳು ಇಂದಿನ ಕಾಲಕ್ಕೆ ಅತ್ಯಗತ್ಯ.
ಒಬ್ಬ ಆಕಾಂಕ್ಷಿ ರಾಜಕಾರಣಿ ಹಣಕಾಸಿನ ನಿರ್ವಹಣೆ ಜತೆಗೆ ವಿಜ್ಞಾನ ಮತ್ತು ಪರಿಸರವನ್ನೂ ಅರ್ಥ ಮಾಡಿಕೊಂಡಿದ್ದರೆ ಒಟ್ಟಾರೆ ಇಡೀ ಪರಿಸರಕ್ಕೆ ಒಳ್ಳೆಯದು. ಹಣಕಾಸಿನ ನಿರ್ವಹಣೆ ಅನ್ನುವುದು ಒಂದು ಮನೆ, ಸಂಸ್ಥೆ ಅಥವಾ ಸರ್ಕಾರಕ್ಕೆ ಪ್ರತಿದಿನ ಎದುರಾಗುವ ಸಮಸ್ಯೆಯಾಗಿದೆ. ಹಣಕಾಸಿನ ನಿರ್ವಹಣೆ, ಬೇಡಿಕೆ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ವ್ಯಕ್ತಿಯೂ ಅರ್ಥ ಮಾಡಿಕೊಳ್ಳಬೇಕಾದ ಅತ್ಯಂತ ಅವಶ್ಯಕ ಅಂಶವಾಗಿದೆ.
ರಾಜ್ಯ, ದೇಶದಲ್ಲಿ ಸಂಭವಿಸುವ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಪ್ರದರ್ಶಿಸುವ ಕೌಶಲ್ಯ ಪ್ರಮುಖವಾಗಲಿದೆ. ತಾಳ್ಮೆ ಮತ್ತು ಸಂವಹನವು ಒಬ್ಬ ವ್ಯಕ್ತಿಗೆ ವಿಶ್ವಾಸಾರ್ಹ ಮೌಲ್ಯವನ್ನು ತರುತ್ತದೆ. ಈ ವಿಷಯಗಳನ್ನು ಒಬ್ಬ ವ್ಯಕ್ತಿ ರೂಢಿಸಿಕೊಂಡರೆ ತನ್ನೊಳಗಿನ ನಾಯಕತ್ವ ಹೊರಹೊಮ್ಮಲಿದೆ.
ಕಲಿಕೆಯು ದೈನಂದಿನ ಜೀವನದ ಒಂದು ಭಾಗವಾಗಿದೆ. ರಾಜಕೀಯ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ವೋಟ್ ಬ್ಯಾಂಕ್ ಲೆಕ್ಕಚಾರಗಳ ಜತೆಗೆ ಈ ವಿಚಾರಗಳನ್ನು ತಿಳಿದಿರಬೇಕು. ಏಕೆಂದರೆ ಪಂಚಾಯತ್ ಚುನಾವಣೆಗೂ ಟಿಕೆಟ್ ಪಡೆಯಲು ಭಾರಿ ಪೈಪೋಟಿ ಇದೆ.
ಅಂತಹ ಸ್ಪರ್ಧೆಗಳಿರುವಾಗ ರಾಜಕಿಯ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗುಣಮಟ್ಟದ ಅಭ್ಯರ್ಥಿಗಳಿರುತ್ತಾರೆ ಎಂದುಬು ಸ್ಪಷ್ಟವಾಗಿದೆ. ಇದೇ ಗುಣಮಟ್ಟದ ಪ್ರತಿನಿಧಿ ನಮ್ಮದಾಗಿದ್ದರೆ ಉತ್ತಮ ದಿನಗಳಿಗಾಗಿ ನಮ್ಮನ್ನು ಮುನ್ನಡೆಸಲು ಉತ್ತಮ ಪ್ರತಿನಿಧಿಗಳಿರುತ್ತಾರೆ. ಈ ಧ್ಯೇಯದೊಂದಿಗೆ ಸ್ಪೀಕರ್ ಗಳ ಧ್ವನಿ ಮತ್ತಷ್ಟು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿರಬೇಕು ಎಂದು ಭಾವಿಸುತ್ತೇವೆ.