ತಿರುವನಂತಪುರ : ನಾಲ್ಕು ತಿಂಗಳ ಹಿಂದೆ ಗುಜರಾತ್ ಮೂಲದ ಅಮುಲ್ ಕರ್ನಾಟಕದಲ್ಲಿ ತನ್ನ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದಕ್ಕೆ ಕನ್ನಡ ಪರ ಸಂಘಟನೆಗಳು ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ರಾಜ್ಯದ ರೈತರು ಸಂಪೂರ್ಣ ಬೀದಿಗೆ ಬರಲಿದ್ದಾರೆ ಎಂದೆಲ್ಲ ಹುಯಿಲೆಬ್ಬಿಸಲಾಗಿತ್ತು.
ನಂತರ ಅದು ತಣ್ಣಗಾಯಿತು.
ದೇಶದ ಅನೇಕ ರಾಜ್ಯಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ನಂದಿನಿ ಮೂರು ತಿಂಗಳ ಹಿಂದೆ ಕೇರಳದ ನಾಲ್ಕು ನಗರಗಳಲ್ಲಿ ತನ್ನ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾರಂಭಿಸಿದೆ. ಇದಲ್ಲದೆ ಕೇರಳದಲ್ಲಿ ಮುಂದಿನ ಅರು ತಿಂಗಳಿನಲ್ಲಿ ತನ್ನ ೨೫ ಮಾರಾಟ ಮಳಿಗೆಗಳನ್ನು ತೆರೆಯಲೂ ಕೆಎಂಎಫ್ ಯೋಜನೆ ಹಾಕಿಕೊಂಡಿದೆ. ತಾನು ಕೇರಳ ಹಾಲು ಉತ್ಪಾದನೆ ಒಕ್ಕೂಟಕ್ಕೆ ಪ್ರತಿಸ್ಪರ್ಧಿಯಲ್ಲ ಮತ್ತು ಕೇರಳದಲ್ಲಿ ಕೊರತೆ ಆಗಿರುವ ಹಾಲನ್ನು ಸರಬರಾಜು ಮಾಡಲು ಮುಂದಾಗಿರುವುದಾಗಿ ಕೆಎಂಎಫ್ ಸ್ಪಷ್ಟನೆಯನ್ನೂ ನೀಡಿದೆ. ಆದರೆ ಇದು ಕೇರಳ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿ ಸರ್ಕಾರದಿಂದ ಹಾಲು ಮಳಿಗೆ ತೆರೆಯಲು ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂದು ಆರೋಪಿಸಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುವ ವಿವಾದದ ನಡುವೆ, ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಕೆಸಿಎಂಎಂಎಫ್) ತನ್ನ ಮಿಲ್ಮಾ ಬ್ರಾಂಡ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕದಲ್ಲಿ ಮಳಿಗೆಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ. ಮಿಲ್ಮಾ ಬ್ರ್ಯಾಂಡ್ ಹಾಲಿನ ಉತ್ಪನ್ನಗಳನ್ನು ಮಾತ್ರ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು ಮತ್ತು ಹಾಲು ಮಾರಾಟ ಮಾಡುವುದಿಲ್ಲ ಎಂದು ಕೆಸಿಎಂಎಂಎಫ್ ಅಧ್ಯಕ್ಷ ಕೆ. ಎಸ್. ಮಣಿ ಹೇಳಿದ್ದಾರೆ.
“ನಾವು ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ತೆರೆಯುವ ಆಯ್ಕೆಯನ್ನು ಅನ್ವೇಷಿಸುತ್ತಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಚರ್ಚೆ ಶುರುವಾಗಿದೆ. ಪ್ರಾಸಂಗಿಕವಾಗಿ, ಕೇರಳದಲ್ಲಿ ನಂದಿನಿ ಔಟ್ಲೆಟ್ಗಳನ್ನು ತೆರೆಯುವ ಕೆಎಂಎಫ್ ನಿರ್ಧಾರಕ್ಕೂ ಮಿಲ್ಮಾ ಕರ್ನಾಟಕಕ್ಕೆ ಕಾಲಿಡುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ , ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಮತ್ತು ಕೊಡಗಿನಲ್ಲಿ ಮಳಿಗೆಗಳನ್ನು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ ನಂದಿನಿ ಮಳಿಗೆಗಳನ್ನು ತೆರೆಯಲು ಕೆಎಂಎಫ್ ಇತ್ತೀಚಿನ ನಿರ್ಧಾರವನ್ನು ಕೆಸಿಎಂಎಂಎಫ್ ವಿರೋಧಿಸುತ್ತಿದೆ. ಒಂದು ರಾಜ್ಯದ ಹಾಲು ಮಾರಾಟ ಒಕ್ಕೂಟವು ಮತ್ತೊಂದು ರಾಜ್ಯದಲ್ಲಿ ಹಾಲು ಮಾರಾಟ ಮಾಡುವುದು ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೆಸಿಎಂಎಂಎಫ್ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ಯ ಮಧ್ಯಸ್ಥಿಕೆಯನ್ನು ಸಹ ಕೋರಿತ್ತು. ಎನ್ಡಿಡಿಬಿಯ ಮಧ್ಯಸ್ಥಿಕೆಗೆ ವಹಿಸದಿದ್ದರೆ ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರದೊಂದಿಗೆ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನಿಸುತ್ತದೆ ಎಂದು ಕೇರಳದ ಪಶುಸಂಗೋಪನೆ ಸಚಿವ ಜೆ. ಚಿಂಚು ರಾಣಿ ಈ ಹಿಂದೆ ಹೇಳಿದ್ದರು.
ಇದೀಗ ಎರಡೂ ನೆರೆ ಹೊರೆಯ ರಾಜ್ಯಗಳು ತಮ್ಮ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿರುವುದರಿಂದ ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಡುವುದಂತೂ ನಿಶ್ಚಿತವಾಗಿದೆ.