ನಮಗೆ ಅನಾರೋಗ್ಯ ಉಂಟಾಗಲು ಕೇವಲ ಅಹಿತಕರ ಆಹಾರ, ಕಲುಷಿತ ನೀರು ಮತ್ತು ಅಶುದ್ಧ ಗಾಳಿ ಮಾತ್ರ ಕಾರಣವಲ್ಲ. ಸುತ್ತಮುತ್ತಲಿನ ಪರಿಸರ ಮತ್ತು ದಿನನಿತ್ಯ ಇರುವ ವಾತಾವರಣವೇ ವಿವಿಧ ರೀತಿಯ ಸೋಂಕುಗಳನ್ನು ತರುವ ಸಾಧ್ಯತೆ ಇರುತ್ತದೆ. ಅವುಗಳಲ್ಲಿ ಫಂಗಸ್ಸಿನ ಸೋಂಕು ಒಂದು.
ಫಂಗಸ್ ಎಂದರೇನು?
ಫಂಗಸ್ ಒಂದು ಸೂಕ್ಷ್ಮಾಣುಜೀವಿ. ಇದು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಬರಿಗಣ್ಣಿಗೆ ಕಾಣಿಸುವುದಿಲ್ಲ. ಕೆಲವೊಮ್ಮೆ ಫಂಗಸ್ಸುಗಳು ಮಾನವರ ದೇಹದೊಳಗೆ ಪ್ರವೇಶಿಸಿ ಹಾನಿಕಾರಕವಾಗಿ ಪ್ರಭಾವ ಬೀರುತ್ತವೆ. ಶರೀರದ ರೋಗನಿರೋಧಕ ಶಕ್ತಿ ಕುಂಠಿತಗೊಂಡಾಗ ಫಂಗಸ್ಸುಗಳು ಅನೇಕ ಸೋಂಕುಗಳನ್ನು ಉಂಟುಮಾಡುತ್ತವೆ.
ಫಂಗಸ್ ಸೋಂಕು ಮಾನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕಾಗಿದೆ. ದೇಹದಲ್ಲಿ ತೇವಾಂಶ ಅಧಿಕವಾಗಿರುವ ಪ್ರದೇಶಗಳಲ್ಲಿ ಫಂಗಸ್ಸಿನ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶ, ಮೆದುಳಿಗೆ ಫಂಗಸ್ಸಿನ ಸೋಂಕು ತಗುಲಿದರೆ ಅಪಾಯಕಾರಿ. ಫಂಗಸ್ಸಿನ ಸೋಂಕುಗಳು ಹೆಚ್ಚಾಗಿ ಚರ್ಮದ ಮೂಲಕ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚರ್ಮದ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
ಫಂಗಸ್ ಸೋಂಕಿನ ಲಕ್ಷಣಗಳು:
ಕುತ್ತಿಗೆ, ಭುಜ, ಬೆನ್ನಿನ ಮೇಲೆ ದುಂಡಗಿನ ಅಥವಾ ಬಿಳಿ, ಕೆಂಪು, ಕಪ್ಪು, ಕಂದು ಬಣ್ಣದ ಆಕಾರ ರಹಿತ ಮಚ್ಚೆಗಳು, ಈ ಮಚ್ಚೆಗಳಲ್ಲಾಗುವ ತುರಿಕೆ, ತೊಡೆ ಸಂಧಿ, ಕಂಕಳು, ಕೈ, ಕಾಲು ಬೆರಳಿನ ಸಂಧಿ, ಸ್ತನಗಳ ಕೆಳಭಾಗದಲ್ಲಿ, ಸೊಂಟದ ಭಾಗದಲ್ಲಿ ಚರ್ಮದ ಬಣ್ಣ ಬದಲಾಗುವುದು, ಉರಿ, ತುರಿಕೆ ಉಂಟಾಗುವುದು ಇವುಗಳು ಫಂಗಸ್ ಸೋಂಕಿನ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಡ ಮಾಡದೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕನ್ನು ನಿರ್ಲಕ್ಷ್ಯಮಾಡಿದರೆ ಮುಂದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಫಂಗಸ್ ಸೋಂಕಿಗೆ ಕಾರಣಗಳು:
ಗಾಳಿ, ನೀರು, ಮಣ್ಣು ಸೇರಿದಂತೆ ವಿವಿಧ ಮೂಲಗಳಿಂದ ಫಂಗಸ್ಸುಗಳು ಮನುಷ್ಯನ ದೇಹ ಸೇರಿ ಪರಿಣಾಮ ಬೀರುತ್ತವೆ.
ಫಂಗಸ್ ಸೋಂಕಿಗೆ ಪರಿಹಾರಗಳು:
ದೇಹದ ಯಾವುದೇ ಭಾಗ ತೇವಾಂಶದಿಂದ ಕೂಡಿರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸ್ನಾನ ಮಾಡಿದ ನಂತರ ದೇಹವನ್ನು ಟವೆಲ್ನಿಂದ ಸರಿಯಾಗಿ ಒರೆಸಿಕೊಳ್ಳಬೇಕು. ಸ್ವಚ್ಛ ಟವೆಲ್, ಬಟ್ಟೆಗಳನ್ನು ಪ್ರತಿನಿತ್ಯ ಬಳಸುತ್ತಿರಬೇಕು. ತೇವಾಂಶರಹಿತ ಒಳಉಡುಪುಗಳನ್ನು ಉಪಯೋಗಿಸಬೇಕು. ಸಾಬೂನು ಮತ್ತು ಬಾಚಣಿಗೆಗಳು ಎಲ್ಲರಿಗೂ ಪ್ರತ್ಯೇಕವಾಗಿ ಇರಬೇಕು. ವಾರದಲ್ಲಿ ಕನಿಷ್ಠ ಒಂದು ಸಲವಾದರೂ ತಲೆಗೆ ಸ್ನಾನ ಮಾಡಬೇಕು.
ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳು ಎದುರಾಗುವುದು ಸರ್ವೆ ಸಾಮಾನ್ಯ. ಆದ್ದರಿಂದ ಚರ್ಮದ ಮೇಲೆ ದದ್ದು ಅಥವಾ ಕಲೆಗಳು ಆಗದ ಹಾಗೆ ಎಚ್ಚರವಹಿಸಬೇಕು. ಎಕ್ಜಿಮಾ, ಉಗುರು ಸೋಂಕು, ಮೊಡವೆಗಳು ಮತ್ತು ಫಂಗಲ್ ಸೋಂಕುಗಳ ಬಗ್ಗೆ ಜಾಗೃತರಾಗಿರಬೇಕು.
ರಾತ್ರಿ ಹೊತ್ತು ಮಲಗುವ ಮುಂಚೆ ಬೇವಿನ ಪುಡಿಯನ್ನು ಫಂಗಸ್ ಆದ ಭಾಗಕ್ಕೆ ಸಿಂಪಡಿಸಬೇಕು. ಬೆರಳು ಸಂದಿಗಳಲ್ಲಿ ಫಂಗಸ್ ಸೋಂಕು ಉಂಟಾಗುವುದರಿಂದ ಸ್ನಾನ ಮಾಡಿದ ನಂತರ ಬೆರಳುಸಂದಿಯನ್ನು ಚೆನ್ನಾಗಿ ಟವೆಲ್ಲಿನಿಂದ ನೀರಿನಂಶ ಹೋಗುವಂತೆ ಸ್ವಚ್ಛಮಾಡಿಕೊಳ್ಳಬೇಕು. ಸದಾಕಾಲ ಷೂ ಧರಿಸುವವರು ಆಗಾಗ ಷೂ ಮತ್ತು ಸಾಕ್ಸನ್ನು ತೆಗೆದು ಗಾಳಿಯಾಡಲು ಒಣಗಿಸಬೇಕು.
ಗೃಹಿಣಿಯರು ಪಾತ್ರೆ ತೊಳೆಯರು, ಅಡುಗೆ ಮಾಡಲು ಮತ್ತು ಮನೆ ಒರೆಸುವಾಗ ಹೀಗೆ ಸದಾಕಾಲ ನೀರಿನ ಸಂಪರ್ಕದಲ್ಲಿ ಇರುತ್ತಾರೆ. ಇವರು ಜಾಗರೂಕರಾಗಿರಬೇಕು.
ದಿನನಿತ್ಯ ಸಾಕಷ್ಟು ನೀರನ್ನು ಅಂದರೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಜೊತೆಗೆ ಆಹಾರದಲ್ಲಿ ಬದನೆಕಾಯಿ ಮತ್ತು ವಾಯುಕಾರಕ ಪದಾರ್ಥಗಳನ್ನು ಉಪಯೋಗಿಸಬಾರದು ವ್ಯಾಯಾಮ ಅಥವಾ ನಡಿಗೆಯನ್ನು ಪ್ರತಿನಿತ್ಯ ಕನಿಷ್ಠ ಒಂದುಗಂಟೆ ಮಾಡಿದರೆ ಉತ್ತಮ. ಉತ್ತಮವಾದ ಚಪ್ಪಲಿ/ಷೂಗಳನ್ನು ಧರಿಸಬೇಕು. ಹೀಗೆ ಉತ್ತಮ ಜೀವನಶೈಲಿಯನ್ನು ಪಾಲಿಸಿದರೆ ಫಂಗಸ್ ಸೋಂಕಿನಿಂದ ಪಾರಾಗಬಹುದು.