ಭಾರತದಲ್ಲಿ ವಿದ್ಯುತ್ಚಾಲಿತ ವಾಹನಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇವಿ ವಾಹನ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇವಿ ವಾಹನಗಳು ಹೆಚ್ಚಾಗುತ್ತಿದ್ದಂತೆ ಚಾರ್ಜಿಂಗ್ ಸ್ಟೇಷನ್ಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇವಿ ಚಾರ್ಜಿಂಗ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದಕ್ಕೆ ಕೈ ಹಾಕಿದೆ.
ನಕ್ಷೆಯ ಮೂಲಕ ನಿಮ್ಮ ಸಮೀಪದಲ್ಲಿರುವ ವಿದ್ಯುತ್ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ಗಳನ್ನು ಪತ್ತೆಹಚ್ಚುವಂತಹ ಮಾಸ್ಟರ್ ಆ್ಯಪ್ವೊಂದನ್ನು ಅಭಿವೃದ್ಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೂನ್ 7ರಂದು ನೀತಿ ಆಯೋಗವು ಇದಕ್ಕೆ ಸಂಬಂಧಿಸಿದ ಕಂಪನಿಗಳೊಂದಿಗೆ ಸಭೆಯನ್ನೂ ನಡೆಸಿದೆ.
ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿವೆ ಎಂಬುದನ್ನು ಕುಳಿತಲ್ಲಿಂದಲೇ ಹುಡುಕಿ, ಸೇವೆ ಪಡೆಯುವಂತಹ ಅವಕಾಶವನ್ನು ಈ ಮಾಸ್ಟರ್ ಆ್ಯಪ್ ಕಲ್ಪಿಸಲಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಹಣಕಾಸು ನೆರವಿನಿಂದ ಈ ಯೋಜನೆ ಜಾರಿಗೆ ಬರಲಿದೆ. ಈ ಆ್ಯಪ್ ಅನ್ನು ಭಾರತ ಸರ್ಕಾರವೇ ನಿರ್ವಹಣೆ ಮಾಡಲಿದೆ.
ಈಗಾಗಲೇ ದೇಶದಾದ್ಯಂತ ಒಟ್ಟು 7,013 ಚಾರ್ಜಿಂಗ್ ಸ್ಟೇಷನ್ಗಳಿವೆ. ಇನ್ನ ಫೇಮ್ ಇಂಡಿಯಾ ಯೋಜನೆಯ 2ನೇ ಹಂತದಲ್ಲಿ ಚಾರ್ಜಿಂಗ್ ಮೂಲಸೌಕರ್ಯಕ್ಕೆ 1,000 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. ಚಾರ್ಜಿಂಗ್ ಸ್ಟೇಷನ್ ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ 68 ನಗರಗಳಲ್ಲಿ 2,877 ಚಾರ್ಜಿಂಗ್ ಸ್ಟೇಷನ್ಗಳನ್ನು ಮಾಡಲು ಕೇಂದ್ರವು ಅನುಮೋದನೆಯನ್ನು ನೀಡಿದೆ. 16 ಹೆದ್ದಾರಿಗಳು ಮತ್ತು ಒಂಬತ್ತು ಎಕ್ಸ್ಪ್ರೆಸ್ವೇಗಳಲ್ಲಿ 1,576 ಚಾರ್ಜಿಂಗ್ ಸ್ಟೇಷನ್ಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೆ, ಪೆಟ್ರೋಲ್ ಬಂಕ್ಗಳಲ್ಲಿ 22,000 ವೇಗದ ಚಾರ್ಜರ್ಗಳನ್ನು ಅಳವಡಿಸಲು ತೈಲ ಸಂಸ್ಥೆಗಳಿಗೆ ಇತ್ತೀಚೆಗೆ 800 ಕೋಟಿ ರೂ ಮಂಜೂರು ಮಾಡಲಾಗಿದೆ
ಮಾಸ್ಟರ್ ಆ್ಯಪ್ನ ವೈಶಿಷ್ಟ್ಯಗಳೇನು:
- ನಿಮ್ಮ ಸಮೀಪದಲ್ಲಿ ಯಾವ ಚಾರ್ಜಿಂಗ್ ಸ್ಟೇಷನ್ ಲಭ್ಯವಿದೆ ಎಂದು ತಿಳಿದುಕೊಳ್ಳಬಹುದು.
- ಮುಂಚಿತವಾಗಿಯೇ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು.
- ಪಾವತಿಯನ್ನೂ ಮುಂಚಿತವಾಗಿಯೇ ಮಾಡಬಹುದು.