ಟ್ರಾಫಿಕ್ ಸಮಸ್ಯೆ ಹೊರಬರುವ ಉದ್ದೇಶದಿಂದ ರಸ್ತೆ ಮಧ್ಯದಲ್ಲಿ ಟ್ರಾಫಿಕ್ ಲೈಟ್ಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಆ ಲೈಟ್ ಗಳು ಬೇರೆ ಬಣ್ಣದಲ್ಲಿ ಇಲ್ಲದೆ ಏಕೆ ಕೆಂಪು, ಹಸಿರು, ಹಳದಿ ಬಣ್ಣದಲ್ಲಿದೆ ಎಂದು ಸಾಮಾನ್ಯ ಜನರಿಗೆ ಗೊತ್ತಿಲ್ಲದೇ ಇರಬಹುದು.
ಟ್ರಾಫಿಕ್ ದೀಪಗಳು ಕೆಂಪು, ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿರುತ್ತದೆ. ಇದು ಯಾಕೆ ಈ ಬಣ್ಣದಲ್ಲಿರುತ್ತದೆ ಬೇರೆ ಬಣ್ಣದಲ್ಲಿ ಯಾಕಿಲ್ಲ ಎಂದು ಯೋಚಿಸುವುದಾದರೆ ಮೊದಲ ಬಾರಿಗೆ ಟ್ರಾಫಿಕ್ ಲೈಟ್ ಬಳಸಿದ ಜನರು ಈ ಬಣ್ಣಗಳನ್ನು ಏಕೆ ಆರಿಸಿಕೊಂಡರು? ಬಹುಶಃ ನಾವು ಇದನ್ನು ನಮ್ಮನ್ನು ಕೇಳಿಕೊಂಡಿಲ್ಲ. ಏಕೆಂದರೆ, ನಾವೆಲ್ಲ ರಸ್ತೆಯಲ್ಲಿ ನಮ್ಮ ಹೋಗುವ ಸ್ಥಳವನ್ನು ಬೇಗ ತಲುಪುವತ್ತ ಗಮನ ಹರಿಸುತ್ತೇವೆ. ಇದನ್ನು ಬಿಟ್ಟು ರೋಡಿನಲ್ಲಿರುವ ಲೈಟ್ ಗಳ ಬಗ್ಗೆ ವಿಮರ್ಶೆ ಮಾಡಲು ಹೋಗಿರುವುದಿಲ್ಲ.
1910 ರಲ್ಲಿ ಮೊದಲ ಬಾರಿಗೆ ಟ್ರಾಫಿಕ್ ದೀಪಗಳನ್ನು ಬಳಸಲಾಯಿತು. ಆ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಸಿಳ್ಳೆ ಹೊಡೆದು, ಲೈಟ್ ಹಾಕಿಕೊಂಡು ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುತ್ತಿದ್ದರು.1920 ರಲ್ಲಿ, ವಿಲಿಯಂ ಪಾಟ್ಸ್ ಮೊದಲ ಟ್ರಾಫಿಕ್ ಲೈಟ್ ಅನ್ನು ಜಾರಿಗೆ ತಂದರು. ಆ ಸಮಯದಲ್ಲಿ ಆ ದೀಪಗಳ ಬಗ್ಗೆ ಯಾವುದೇ ನಿಯಮಗಳಿರಲಿಲ್ಲ. ಅಲ್ಲದೆ, ಅವರು ವಿವಿಧ ಬಣ್ಣದ ಮಾದರಿಗಳನ್ನು ಸಹ ಹೊಂದಿದ್ದರು. ಇವುಗಳಿಂದ ಜನರ ಗೊಂದಲಕ್ಕೂ ಒಳಗಾಗಿದ್ದರು.1935 ರಲ್ಲಿ, ಅಮೆರಿಕಾದಲ್ಲಿ ಫೆಡರಲ್ ಹೈವೇ ಅಡ್ಮಿನಿಸ್ಟ್ರೇಷನ್ ಅದೇ ರೀತಿಯ ಸಂಚಾರ ಸಾಧನಗಳನ್ನು ಜಾರಿಗೆ ತಂದಿತು. ಆಗ ಟ್ರಾಫಿಕ್ ದೀಪಗಳು ಕೆಂಪು, ಹಸಿರು ಮತ್ತು ಹಳದಿಯಾಗಿರಬೇಕು ಎಂಬ ನಿಯಮವನ್ನು ತಂದರು.
ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳು ಬರುವ ಮೊದಲು, ರೈಲುಗಳಿಗೆ ಈ ವಿಶೇಷ ಬೆಳಕಿನ ಸಂಕೇತಗಳನ್ನು ಬಳಸಲಾಗುತ್ತಿತ್ತು. ಆ ಬೆಳಕಿನ ಸಂಕೇತಗಳ ಮೂಲಕ ರೈಲುಗಳು ಸರಾಗವಾಗಿ ಚಲಿಸಲು ಸಹಕಾರಿಯಾಗುತ್ತಿತ್ತು. ಆ ಸಂಕೇತಗಳ ಪ್ರಕಾರ ಕೆಂಪು ಎಂದರೆ ನಿಲ್ಲಿಸು, ಬಿಳಿ ಎಂದರೆ ಹೋಗಬಹುದು, ಹಸಿರು ಎಂದರೆ ಎಚ್ಚರಿಕೆಯಿಂದ ಮುಂದುವರಿಯಬಹುದು ಎಂಬುದಾಗಿತ್ತು.
ಕಾಲಕ್ರಮೇಣ ಬಿಳಿ ದೀಪಗಳು ರೈಲ್ವೇ ಚಾಲಕರಿಗೆ ಗೊಂದಲವನ್ನುಂಟು ಮಾಡುತ್ತಿತ್ತು. ಕೆಲವೊಮ್ಮೆ ಬಿಳಿ ಲೈಟ್ ಉರಿಯುತ್ತಿದೆಯಾ ಅಥವಾ ಯಾವುದಾದ್ರೂ ಲೈಟ್ ಬಿದ್ದು ಉರಿದಂತೆ ಕಾಣಿಸುತ್ತೀದೆಯಾ ಎಂಬ ಪ್ರಶ್ನೆ ಚಾಲಕರಲ್ಲಿ ಮೂಡುಲಾರಂಭಿಸಿತು. ಈ ಸಂದರ್ಭದಲ್ಲಿ ಅಪಘಾತಗಳೂ ಹೆಚ್ಚಾಗಿ ಸಂಭವಿಸತೊಡಗಿತ್ತು. ಹಾಗಾಗಿ. ಬಿಳಿ ದೀಪಗಳನ್ನು ತೆಗೆದುಹಾಕಲಾಯಿತು. ಅವುಗಳ ಬದಲಿಗೆ ಹಸಿರು ಬಣ್ಣದ ದೀಪಗಳನ್ನು ಅಳವಡಿಸಲಾಯಿತು. ಹಸಿರು ಎಂದರೆ ನೀವು ಹೋಗಬಹುದು. ಹಾಗೆಯೇ, ಎಚ್ಚರಿಕೆಯ ಸಂಕೇತಕ್ಕೆ ಹಳದಿ ಬಣ್ಣ ತಂದರು. ಈ ಬಣ್ಣಗಳು ಬೇಗನೆ ಜನರ ಕಣ್ಣಿಗೆ ಕಾಣುವ ಕಾರಣ ಇದನ್ನು ಅಳವಡಿಸಲಾಯಿತು.
ಇನ್ನೂ ಕೆಂಪು ಬಣ್ಣ ದೂರದಿಂದಲೆ ಗೋಚರಿಸುತ್ತದೆ. ಕೆಂಪು ಬಣ್ಣ ಅತಿ ಉದ್ದದ ತರಂಗಾಂತರವನ್ನು ನೀಡಬಲ್ಲವು. ಆದ್ದರಿಂದ, ದೂರದಿಂದ ಕೆಂಪು ಬಣ್ಣವನ್ನು ನೋಡಿ, ತ್ವರಿತವಾಗಿ ನಿಲ್ಲಿಸಲು ಸಾಧ್ಯವಿದೆ. ಅಪಘಾತ ಸಂಭವಿಸಿದರೆ, ಕೆಂಪು ಬಣ್ಣದ ಮೂಲಕ ಅಪಾಯವನ್ನು ಮೊದಲೇ ಗ್ರಹಿಸಲು ಅವಕಾಶವಿರುವುದರಿಂದ ಜನರೂ ಸಹ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಎಂಬ ಕಾರಣಕ್ಕೆ ರೈಲು ಮತ್ತು ರಸ್ತೆಗಳಲ್ಲಿ ಕೆಂಪು ಬಣ್ಣವನ್ನು ನಿಲ್ಲಿಸುವ ಸಂಕೇತವಾಗಿ ಇಡಲಾಗಿದೆ.
ಇವೆಲ್ಲ ಕಾರಣಕ್ಕಾಗಿ ಕೆಂಪು ಹಸಿರು ಹಳದಿ ಬಣ್ಣಗಳನ್ನು ಸಿಗ್ನಲ್ ಗಳಲ್ಲಿ ಉಪಯೋಗಿಸಲು ಜಾರಿ ಮಾಡಲಾಯಿತು. ಇದನ್ನು ಜಾರಿಗೆ ತಂದ ಮೇಲೆ ತುಂಬಾ ಆಕ್ಸಿಡೆಂಟ್ ಗಳು ಆಗುವುದು ತಪ್ಪಿದೆ ಎಂದು ಹೇಳಬಹುದು.