ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರೋಚಕ ಗೆಲುವು ಕಂಡಿದೆ. ಈಗ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಬಿಜೆಪಿಯನ್ನು ಸೋಲಿಸಲಿದೆ. ದ್ವೇಷದ ಸಿದ್ದಾಂತವನ್ನು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ಭಾರತದ ಜನರೇ ಸೋಲಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿನ ಭಾರತದ ಸಾಗರೋತ್ತರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಬುಡಮೇಲು ಮಾಡಬಲ್ಲೆವು ಎಂದು ನಾವು ಕರ್ನಾಟಕ ಚುನಾವಣೆಯಲ್ಲಿ ತೋರಿಸಿದ್ದೇವೆ ಎಂದಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಮಾಧ್ಯಮಗಳನ್ನು ತಮ್ಮ ಪರ ಮಾಡಿಕೊಳ್ಳಲು ಪ್ರಯತ್ನಿಸಿತು. ಬಿಜೆಪಿ ಹೆಚ್ಚಿನ ಹಣ ಹೊಂದಿತ್ತು. ತನ್ನದೇ ಸರ್ಕಾರವಿದ್ದರೂ ಕೂಡ ನಾವು ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ತೆಲಂಗಾಣ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ ಎಂದರು.
–
ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಉದ್ಯಮಿ ಗೌತಮ್ ಅದಾನಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಡಿಶಾದ ರೈಲು ಅಪಘಾತದಿಂದ ನಾವೆಲ್ಲರೂ ತೀವ್ರ ದುಃಖಿತರಾಗಿದ್ದೇವೆ. ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಶಾಲಾ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ತೆಗೆದುಕೊಳ್ಳುವುದಾಗಿ ನಿರ್ಧರಿಸಿದೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅದಾನಿ ಟ್ವೀಟ್ ಮಾಡಿದ್ದಾರೆ.
–
ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಆರಂಭವಾಗುವ ನಿರೀಕ್ಷೆ ಇದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕ, ಕೇರಳ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಿಗೆ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಜೂನ್ 5ರಂದು ಆಗ್ನೇಯ ಅರೇಬಿಯನ್ ಸಮುದ್ರದ ಬಳಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಮುಂದಿನ ಮೂರು ದಿನಗಳ ಕಾಲ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ದಕ್ಷಿಣದ ರಾಜ್ಯಗಳಾದ ಕೇರಳ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.
–
ಜಾಗತಿಕ ಜಲ ಮಾರ್ಗ ಈಜಿಪ್ಟ್ ನ ಸುಯೆಜ್ ಕಾಲುವೆಯ ಏಕಪಥದಲ್ಲಿ ಇಂದು ತೈಲ ಟ್ಯಾಂಕರ್ ವೊಂದು ಕೆಟ್ಟು ನಿಂತು ಆತಂಕ ಸೃಷ್ಟಿ ಮಾಡಿತ್ತು.
ಮಾಲ್ಟಾದ ತೈಲ ಸಾಗಣೆ ಹಡಗು ಸೇವಿಗೋರ್ ಸುಯೆಜ್ ಕಾಲುವೆಯ ಸಮೀಪದಲ್ಲಿ ಯಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಬಳಿಕ ಕೆಟ್ಟು ನಿಂತ ಹಡಗನ್ನು ಸಾಗಿಸಲು ಮೂರು ಟಗ್ ಬೋಟ್ ಗಳನ್ನು ನಿಯೋಜಿಸಲಾಗಿತ್ತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ತೈಲ ಟ್ಯಾಂಕರ್ ಅನ್ನು ಬೇರೆಡೆಗೆ ಎಳೆದು ಇತರೆ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಕಾಲುವೆ ಪ್ರಾಧಿಕಾರ ತಿಳಿಸಿದೆ.