ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ್ದ ಗ್ಯಾರಂಟಿಗಳಲ್ಲೊಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣ ಕುರಿತು ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದಗಿನಿಂದ ಹಲವಾರು ಹೈಡ್ರಾಮಗಳು ನಡೆಯಿತು. ಈಗ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದು, ಹೇಳಿದಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದೆ. ಮಂಗಳವಾರ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದ್ದಾರೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಉಚಿತ ಪ್ರಯಾಣಕ್ಕೆ ಐದು ಷರತ್ತುಗಳು:
ರೇಷನ್ ಕಾರ್ಡ್, ಆಧಾರ್, ವೋಟರ್ ಐಡಿ:
ಮೊದಲಿಗೆ, ಮಹಿಳೆಯರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಪ್ರತ್ಯೇಕ ಪಾಸ್ ನೀಡಲಾಗುವುದಿಲ್ಲ. ಪ್ರತ್ಯೇಕ ಪಾಸ್ ಗಳ ಬದಲಿಗೆ, ಮಹಿಳೆಯರು ತಮ್ಮ ಭಾವಚಿತ್ರ ಹಾಗೂ ವಿಳಾಸ ದೃಢೀಕರಣಗೊಳಿಸುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದಾಗಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಪ್ರಯಾಣಿಸಬಹುದಾಗಿದೆ.
ರಾಜ್ಯದ ಮಹಿಳೆಯರಿಗೆ ಮಾತ್ರ ಅವಕಾಶ:
ಕರ್ನಾಟಕದಲ್ಲಿ ವಾಸವಿರುವ ಮಹಿಳೆಯರಿಗಷ್ಟೇ ಅವಕಾಶ ಎಂಬ ವಿಚಾರವನ್ನೂ ನಿಯಮಾವಳಿಗಳಲ್ಲಿ ಪ್ರಸ್ತಾಪಿಸಲಾಗಿದೆ. ಹೊರರಾಜ್ಯಗಳಿಂದ ಬರುವ ಮಹಿಳೆಯರಿಗೆ ಇಲ್ಲಿನ ಕೆಎಸ್ಆರ್ ಟಿಸಿಯ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿಲ್ಲ.
ಅಂತರಾಜ್ಯಗಳಿಗೆ ಹೋಗುವ ಬಸ್ಸುಗಳಲ್ಲಿ ಉಚಿತವಿಲ್ಲ:
ಕರ್ನಾಟಕದ ಗಡಿಯೊಳಗೆ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅನ್ಯ ರಾಜ್ಯಗಳ ಊರುಗಳಿಗೆ ಹೋಗುವ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ.
ಎಸಿ ಬಸ್ಸುಗಳಲ್ಲಿ, ಡೀಲಕ್ಸ್ ಬಸ್ಸುಗಳಲ್ಲಿ ಉಚಿತವಿಲ್ಲ:
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ಬಸ್ ಗಳಲ್ಲಿ (ಎ.ಸಿ. ಬಸ್ ಗಳಲ್ಲಿ) ಹಾಗೂ ಡಿಲಕ್ಸ್ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ.
ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಪ್ರಯಾಣಿಸಲು ಉಚಿತ:
ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶವಿದೆ. ಉದಾಹರಣೆಗೆ, ಬೆಂಗಳೂರು ನಗರದಲ್ಲಿ ಬಿಎಂಟಿಸಿ ಸಂಸ್ಥೆ ನಾಗರಿಕರಿಗೆ ಬಸ್ ಸೇವೆ ನೀಡುತ್ತಿದೆ. ಬೆಂಗಳೂರು ನಗರದಲ್ಲಿ ವಾಸವಿರುವ ಮಹಿಳೆಯರು ಬಿಎಂಟಿಸಿಯ ವೋಲ್ವೋ ಬಸ್ ಗಳನ್ನು (ಹವಾ ನಿಯಂತ್ರಿತ) ಹೊರತುಪಡಿಸಿ ಕೇವಲ ಸಾಮಾನ್ಯ ಬಸ್ ಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಪ್ರತಿ ದಿನ ಎಷ್ಟು ಜನರ ಪ್ರಯಾಣ? ಮಹಿಳೆಯರೆಷ್ಟು?
ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ ಪ್ರತಿದಿನ ನಾಲ್ಕು ಸಾರಿಗೆ ಸಂಸ್ಥೆಗಳ (ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ) ಬಸ್ಗಳಲ್ಲಿ 82.51 ಲಕ್ಷ ಜನ ಪ್ರಯಾಣಿಸುತ್ತಾರೆ. ಅದರಲ್ಲಿ ಶೇ.50ರಷ್ಟು ಅಂದರೆ 41.25 ಲಕ್ಷ ಮಹಿಳೆಯರು ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಬಿಎಂಟಿಸಿಯಲ್ಲಿ 27.34 ಲಕ್ಷ, ಕೆಎಸ್ಆರ್ಟಿಸಿಯಲ್ಲಿ 23.59 ಲಕ್ಷ, ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ 16.94 ಲಕ್ಷ ಹಾಗೂ ಕೆಕೆಆರ್ಟಿಸಿಯಲ್ಲಿ 14.64 ಲಕ್ಷ ಜನ ಪ್ರತಿದಿನ ಪ್ರಯಾಣ ಮಾಡುತ್ತಾರೆ.