ಭಾರತ ದೇಶವು ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದು ಇತ್ತೀಚೆಗೆ ವಿಶ್ವ ಸಂಸ್ಥೆ ವರದಿಯೊಂದನ್ನು ನೀಡಿದೆ. ಹಲವಾರು ತಲೆಮಾರುಗಳಿಂದ ಚೀನಾ ವಿಶ್ವದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು ಆದರೆ ಈ ಬಾರಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಪ್ರಥಮ ಸ್ಥಾನದಲ್ಲಿದೆ.
ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತವು142.86 ಕೋಟಿ ಜನರನ್ನು ಹೊಂದಿ ಪ್ರಥಮ ಸ್ಥಾನದಲ್ಲಿದೆ ಹಾಗೆಯೇ ಚೀನಾ 142.57 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
ಭಾರತದ ಜನಸಂಖ್ಯೆಯಲ್ಲಿ 0-14 ವಯಸ್ಸಿನವರು ಶೇ. 25ರಷ್ಟು, 10-19 ವಯಸ್ಸಿನವರು ಶೇ.18ರಷ್ಟು, 10-24 ವಯಸ್ಸಿನವರು ಶೇ. 26ರಷ್ಟು, 15-64 ವಯಸ್ಸಿನವರು ಶೇ.68ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.7ರಷ್ಟು ಇದ್ದಾರೆ. ಇನ್ನೂ ಚೀನಾದಲ್ಲಿ 0-14 ವಯಸ್ಸಿನವರು ಶೇ.17ರಷ್ಟು, 10-19 ವಯಸ್ಸಿನವರು ಶೇ. 12ರಷ್ಟು, 10-24 ವಯಸ್ಸಿನವರು ಶೇ.69ರಷ್ಟು, 15-64 ವಯಸ್ಸಿನವರು ಶೇ. 69ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.14ರಷ್ಟಿದ್ದಾರೆ. ಅಂದರೆ ಚೀನಾ ದೇಶವು 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 200 ಮಿಲಿಯನ್ ಜನರನ್ನು ಹೊಂದಿದೆ.
ತಜ್ಞರ ಪ್ರಕಾರ, ಕೇರಳ ಮತ್ತು ಪಂಜಾಬ್ಗಳು ವಯಸ್ಸಾದ ಜನಸಂಖ್ಯೆಯನ್ನು ಹೊಂದಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರ ಅತೀ ಹೆಚ್ಚು ಯುವ ಜನಾಂಗವನ್ನು ಹೊಂದಿವೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದ ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಭಾರತದಲ್ಲಿ 15 ರಿಂದ 64 ವರ್ಷ ವಯಸ್ಸಿನ ದುಡಿಯುವ ವರ್ಗ97 ಕೋಟಿಯಷ್ಟು ಇದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಮುಂದಿನ ದಶಕಗಳಲ್ಲಿ ಈ ಸಂಖ್ಯೆ ಇನ್ನೂ ಏರಿಕೆಯಾಗಲಿದೆ ಹಾಗೆಯೇ 2050ರ ವೇಳಗೆ ಈ ವಯಸ್ಸಿನ ಜನರ ಸಂಖ್ಯೆ 113 ಏರಿಕೆಯಾಗಲಿದೆ ಎಂದು ವಿಶ್ವ ಸಂಸ್ಥೆ ವರದಿಯನ್ನು ನೀಡಿದೆ.
ಜನಸಂಖ್ಯೆಯ ನಿಯಂತ್ರಣಕ್ಕೆ 50ವರ್ಷಗಳಿಂದ ಹಲವು ಯೋಜನೆಗಳನ್ನು ರೂಪಿಸಿದ್ದರೂ ಕೂಡ ಭಾರತ ಚೀನಾವನ್ನು ಮೀರಿಸಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಜನಸಂಖ್ಯಾ ಏರಿಕೆಯನ್ನು ಹೊರೆ ಎಂದು ಭಾವಿಸದೇ ಭಾರತ ದೇಶ ಅದನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಬೇಕಿದೆ.
ಒಂದು ದೇಶದಲ್ಲಿ ಯುವ ಜನತೆ ಅಂದರೆ ದುಡಿಯುವ ವರ್ಗ ಯಾವ ಪ್ರಮಾಣದಲ್ಲಿದೆ ಎಂಬುದರ ಮೇಲೆ ಆ ದೇಶದ ಆರ್ಥಿಕ ಸ್ಥಿತಿ ನಿರ್ಧಾರವಾಗುತ್ತದೆ. ಈಗಾಗಲೇ ಮುಂದುವರೆದ ರಾಷ್ಟ್ರಗಳಲ್ಲಿ ದುಡಿಯುವ ವರ್ಗ ಹೆಚ್ಚಿನ ಪ್ರಮಾಣದಲ್ಲಿದೆ ಆದರೆ ಇನ್ನೂ ಕೆಲವೇ ವರ್ಷಗಳಲ್ಲಿ ವೃದ್ಧರಾಗಲಿದ್ದಾರೆ ಮತ್ತು ಆ ದೇಶಗಳಲ್ಲಿ ಜನನ ಪ್ರಮಾಣ ಕುಂಠಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿ ಕುಸಿತವಾಗುವ ಸಾಧ್ಯತೆಗಳಿವೆ. ಆದರೆ ಭಾರತ ವಿಷಯದಲ್ಲಿ ನೋಡಿದರೆ ದುಡಿಯುವ ಜನ ವೃದ್ದರಾಗುತ್ತಿದ್ದಂತೆ ಅವರ ಜಾಗದಲ್ಲಿ ಹೊಸ ದುಡಿಯುವ ವರ್ಗ ಸೃಷ್ಟಿಯಾಗಲಿದೆ.
ಹಾಗೆಯೇ ಇಲ್ಲಿಯವರೆಗೆ ಜನಸಂಖ್ಯೆಯಲ್ಲಿ ವಿಶ್ವಕ್ಕೆ ಮೊದಲ ಸ್ಥಾನದಲ್ಲಿದ್ದ ಚೀನಾದ ಜನಸಂಖ್ಯೆಯ ಬೆಳವಣಿಗೆಯ ದರವು 1980ರಿಂದ ಕ್ಷೀಣಿಸುತ್ತಿದೆ. ಒಂದೇ ಮಗು ನೀತಿಯಿಂದಾಗಿ ಅನುಸರಿಸಿರುವುದರಿಂದ ಚೀನಾದಲ್ಲಿ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಕೆಲವು ಪ್ರದೇಶಗಳು ಈಗಾಗಲೇ ಜನನ ಪ್ರಮಾಣ ಹೆಚ್ಚಿಸಲು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಜನಸಂಖ್ಯಾ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ಏಷ್ಯಾದ ಮೂರನೇ ಏಕಾನಮಿ ದೇಶವಾಗಿರುವ ಭಾರತವು ಅತೀ ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲದೊಂದಿಗೆ ವಿಶಾಲವಾದ ಮಾರುಕಟ್ಟೆಯನ್ನು ಹೊಂದಿದೆ. ಜನರು ಬೇರೆ ದೇಶಗಳಲ್ಲಿ ದುಡಿದು ಸಂಪಾದನೆಯನ್ನು ತಾಯಿ ನಾಡಿಗೆ ನೀಡುತ್ತಾರೆ. ಹಾಗೆಯೇ ದುಡಿಯುವ ಕಾರ್ಮಿಕ ಜನ ಸಂಪನ್ಮೂಲ ಹೇರಳವಾಗಿದ್ದು, ಜಾಗತಿಕ ಉತ್ವಾದಕ ಕಂಪನಿಗಳು ಭಾರತದಲ್ಲಿ ತಮ್ಮ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮುಂದಾಗಿರುವುದರಿಂದ ದೇಶದ ಉತ್ಪಾದಕ ಶಕ್ತಿ ವೃದ್ಧಿಸುತ್ತದೆ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. ದೇಶದಲ್ಲಿ ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ.
ಜನಸಂಖ್ಯೆ ಹೆಚ್ಚಾಳದಿಂದ ಅನೇಕ ಸವಾಲುಗಳನ್ನು ಭಾರತ ಎದುರಿಸಬೇಕಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ರತಿಯೊಬ್ಬರು ಮೂಲಸೌಕರ್ಯದೊಂದಿಗೆ ಜೀವಿಸಲು ಅವರ ಅಗತ್ಯ ಬೇಡಿಕೆ ನಿರ್ವಹಿಸಲು ಕಷ್ಟವಾಗುತ್ತದೆ. ಪ್ರತಿಯೊಬ್ಬ ಪ್ರಜೆಯು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಸಾಧ್ಯಾವಾಗುವುದಿಲ್ಲ. ಹಾಗೆಯೇ ಉದ್ಯೋಗಾವಕಾಶಗಳನ್ನು ನೀಡುವುದು ಕೂಡ ಸವಾಲಾಗುತ್ತದೆ. ಯುವ ಜನತೆ ಕೃಷಿಯಿಂದ ದೂರ ಸರಿಯುತ್ತಿದ್ದು, ಅವರಿಗೆ ಪರ್ಯಾಯ ಉದ್ಯೋಗ ನೀಡುವುದು ಸಮಸ್ಯೆಯಾಗಿ ಪರಿಣಮಿಸಲಿದೆ.