ಮಂಗಳೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು.
ಕೊಂಕಣಿ ಸಾಂಸ್ಕೃತಿ ಕಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗ ಭೂಮಿಗೆ ಮಹತ್ತರ ಕೊಡುಗೆ ನೀಡಿದೆ. `ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗ ಭೂಮಿ ಡಿಪ್ಲೋಮಾ ನಡೆಸುತ್ತಿದ್ದು, ಇದುವರೆಗೆ ನೂರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆದಿದ್ದಾರೆ. ಸುಮಾರು 50 ನಾಟಕ, ಕಿರು ನಾಟಕಗಳ 250 ಕ್ಕೂ ಮಿಕ್ಕಿ ಪ್ರದರ್ಶನಗಳು ದೇಶ ವಿದೇಶಗಳಲ್ಲಿ ನಡೆದಿವೆ.
ಮಾಂಡ್ ಸೊಭಾಣ್ ಸಂಸ್ಥೆಯು`ಕಲಾಂಗಣ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಅನನ್ಯ ಬಯಲು ರಂಗ ಮಂದಿರದೊಡನೆ, ರಂಗ ತರಬೇತಿ ಮತ್ತು ಸಂಶೋಧನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ನೇತೃತ್ವದ ತಂಡ ಆಗಮಿಸಿ, ಪರಿಶೀಲಿಸಿದ ಬಳಿಕ ಕಲಾಕುಲ್ ವತಿಯಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ನಡೆಸಲು ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಆಡಳಿತ ಸಮಿತಿ ರಚಿಸಲಾಗಿದ್ದು, ಅದು ಸಭೆ ಸೇರಿ ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ.ಅದರಂತೆ ಸೂಕ್ತ ತಯಾರಿ ನಡೆಸಿದ್ದು, ಎನ್ಎಸ್ಡಿ ಮತ್ತು ರಂಗಾಯಣದಿಂದ ಪದವಿ ಪಡೆದ ಉಪನ್ಯಾಸಕರನ್ನು ನೇಮಿಸಲಾಗುವುದು.
ಜುಲೈ 01 ರಿಂದ ಆರಂಭವಾಗುವ 2024-25 ನೇ ಶೈಕ್ಷಣಿಕ ವರ್ಷದಿಂದ ಈ ರಂಗ ತರಬೇತಿ ಡಿಪ್ಲೋಮಾ ಕೋರ್ಸನ್ನು ಆರAಭಿಸಲಾಗುವುದು.ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದ ಯಾವುದೇ ಮಾತೃ ಭಾಷಿಕ ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆಯಲು ಅರ್ಹರಾಗಿದ್ದು, ಒಂದು ವರ್ಷದ ಎರಡು ಸೆಮಿಸ್ಟರ್ನ ಈ ಕೋರ್ಸ ಕನ್ನಡ ಮತ್ತುಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ.ಅಂತಿಮ ಪರೀಕ್ಷೆಯನ್ನು ವಿಶ್ವವಿದ್ಯಾಲಯವೇ ನಡೆಸುತ್ತದೆ. ಇದು ಪೂರ್ಣಕಾಲೀಕ ಕೋರ್ಸ್ ಆಗಿದ್ದು, ಈ ಕೋರ್ಸ್ ಪಡೆದವರಿಗೆ ಶಾಲೆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಕ್ಷಕರಾಗಿ ದುಡಿಯಲು ಅವಕಾಶ ಲಭಿಸಲಿದೆ.ಅಗತ್ಯವುಳ್ಳವರಿಗೆ ಹಾಸ್ಟೆಲ್ ಸೌಲಭ್ಯವಿದೆ.
ಈ ಕೋರ್ಸ್ ಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು www.manddsobhann.org ಯಿಂದ ಡೌನ್ಲೋಡ್ ಮಾಡಿ, ಸರಿಯಾಗಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ, ಜೂನ್ 15ರೊಳಗೆ ಕಲಾಂಗಣ, ಮಕಾಳೆ, ಶಕ್ತಿನಗರ, ಮಂಗಳೂರು 575016 ಇಲ್ಲಿಗೆ ಅಂಚೆ ಮೂಲಕ ಅಥವಾ ಕೈಯಾರೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ (6364022333-ಆಡಳಿತಾಧಿಕಾರಿ ಅಥವಾ 8105226626-ಕಛೇರಿ)ಇಲ್ಲಿ ಸಂಪರ್ಕಿಸಬಹುದು.
ಪತ್ರಿಕಾ ಗೋಷ್ಠಿಯಲ್ಲಿ ಗುರಿಕಾರ, ಮಾಂಡ್ ಸೊಭಾಣ್ , ಎರಿಕ್ಒಝೇರಿಯೊ, ಅಧ್ಯಕ್ಷ, ಮಾಂಡ್ ಸೊಭಾಣ್, ಲುವಿ ಜೆ. ಪಿಂಟೊ ,ಸದಸ್ಯರು, ಆಡಳಿತ ಸಮಿತಿ, ವಿದುಷಿ ರಾಜಶ್ರೀ ಎಸ್ ಶೆಣೈ, ಸದಸ್ಯರು, ಆಡಳಿತ ಸಮಿತಿ, ಡಾ ಎಸ್ ಬಿ ಎಮ್ ಪ್ರಸನ್ನ, ಆಡಳಿತಾಧಿಕಾರಿ, ಕಲಾಕುಲ್ ಮತ್ತು ಸದಸ್ಯ ಕಾರ್ಯದರ್ಶಿ, ಆಡಳಿತ ಸಮಿತಿ, ಅರುಣ್ರಾಜ್ರೊಡ್ರಿಗಸ್ ಉಪಸ್ಥಿತರಿದ್ದರು.