ರಾಜ್ಯದಲ್ಲಿ ಈಗ ಯಾವುದೇ ಘಟನೆ ನಡೆದರೂ ಕೂಡ ರಾಜಕೀಯ ತಿರುವ ಪಡೆದುಕೊಳ್ಳುವಂತಹ ಸಂದಿಗ್ದ ಪರಿಸ್ಥಿತಿ ಇದ್ದು, ಸದ್ಯಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್ಆರ್ಟಿಸಿ ಬಸ್ ಡಿಪೋ ಆವರಣದಲ್ಲಿ ಚಾಲಕ ಜಗದೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣವು ರಾಜಕೀಯದೊಂದಿಗೆ ತಳುಕು ಹಾಕಿಕೊಂಡಿದೆ.
ರಾಜ್ಯದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಹಣ ಕೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ವರ್ಗಾವಣೆಗೆ ಬೇಸತ್ತು ನಾಗಮಂಗಲದ ಕೆಎಸ್ಆರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ವಾಕ್ಸಾಮರಕ್ಕೆ ಕಾರಣವಾಗಿದೆ.
ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಕೆಎಎಸ್ಆರ್ಟಿಸಿ ಬಸ್ ಚಾಲಕ ಜಗದೀಶ್ ಎಂಬವರು ಜುಲೈ ೪ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಜಗದೀಶ್ ಅವರಿಗೆ ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ವರ್ಗಾವಣೆ ಆದೇಶ ತೆಗೆದುಕೊಳ್ಳದೇ ಜಗದೀಶ್ ನಾಗಮಂಗಲ ಬಸ್ ಡಿಪೋ ಮುಂದೆಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಷ್ಟೇ ಅಲ್ಲದೇ ವಿಷ ಸೇವಿಸಿದ ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ಸಿಬ್ಬಂದಿ ಯತ್ನಿಸಿದರೂ ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂಬುದಾಗಿ ಹಠ ಹಿಡಿದಿದ್ದರು. ಕೊನೆಗೆ ಜಗದೀಶ್ ಅವರ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಪೋ ಉಸ್ತುವಾರಿ ಮಂಜುನಾಥ್, ಚಾಲಕ ಜಗದೀಶ್ ಮಹಿಳಾ ಪ್ರಯಾಣಿಕರ ಜೊತೆ ಅನುಚಿತ ವರ್ತನೆ ತೋರಿರುವುದಾಗಿ ದೂರು ಬಂದಿತ್ತು. ಆ ದೂರಿನ ಅನ್ವಯ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಾಗಮಂಗಲದ ಕೆಎಸ್ಆರ್ಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕ ಹೆಚ್.ಆರ್ ಜಗದೀಶ್ ಅವರನ್ನು ರಾಜಕೀಯ ಒತ್ತಡದ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಡೆತ್ ನೋಟ್ ಬರೆದಿಟ್ಟಿರುವ ಜಗದೀಶ್:
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಚಾಲಕ ಜಗದೀಶ್ ಡೆತ್ ನೋಟ್ ಬರೆದಿರುವುದು ಬೆಳಕಿಗೆ ಬಂದಿದೆ. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನು ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದ್ರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನವನ್ನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದು, ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಆಕ್ರೋಶ:
ಚಾಲಕ ಜಗದೀಶ್ ಆತ್ಮಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ನಾಗಮಂಗಲದ ಡಿಪೋದ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಸಚಿವ ಚಲುವರಾಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ನಾಗಮಂಗಲದ ಡಿಪೋದಲ್ಲಿ 60ಕ್ಕೂ ಹೆಚ್ಚು ಬಸ್ಗಳು ನಿಂತಲ್ಲೇ ನಿಂತಿವೆ.
ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟನೆ:
ವರ್ಗಾವಣೆ ಸಹಜ ಪ್ರಕ್ರಿಯೆ. ಕೆಲವರು ಅನಾವಶ್ಯಕ ಈ ರೀತಿ ರಾಜಕೀಯ ಮಾಡುವುದು ಪರಿಪಾಟಲು. ಸರ್ಕಾರದ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತೆ. ನಾನು ಆ ಚಾಲಕನಿಗೆ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ, ವರ್ಗಾವಣೆ ಮಾಡಿ ಎಂದು ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ. ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ರು, ಹಾಗಾಗಿ ಅದನ್ನ ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಮೇಲೆ ಹೆಚ್ಡಿಕೆ ವಾಗ್ದಾಳಿ:
ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತಿ ಸದಸ್ಯರು. ಆದರರಿಂದ ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ಊರಿನಲ್ಲಿರುವ ಮಹದೇವ ಎಂಬ ರೌಡಿ ಜಗದೀಶ್ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಮತ್ತೊಂದೆಡೆ ಜಗದೀಶ್ಗೆ ಅಧಿಕಾರಿಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಡೆತ್ ನೋಟ್ನಲ್ಲಿ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ. ಮಂತ್ರಿ ಸ್ಥಾನ ಏನು ಶಾಶ್ವತನಾ? ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್ಐ ಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ ಎಂದು ಸರ್ಕಾರದ ಮೇಲೆ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.