ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದಿರುವ ಬೆಂಗಳೂರು ನಗರದ ಕೆ. ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಹೊಂದಿರುವ ನೂರಾರು ಕೋಟಿ ರೂಪಾಯಿಗಳ ಬೇನಾಮಿ ಆಸ್ತಿಯ ಕುರಿತು ಲೋಕಾಯುಕ್ತದ ವಿಶೇಷ ತನಿಖಾ ತಂಡದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
2002ರಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಸೇರಿದ ಅಜಿತ್ ರೈ 2008ರಲ್ಲಿ ತಹಸೀಲ್ದಾರ್ ಆಗಿ ಬಡ್ತಿ ಹೊಂದಿದ್ದಾರೆ. ಸರ್ಕಾರಿ ಕೆಲಸಕ್ಕೆ ಸೇರಿದ 21 ವರ್ಷಗಳಲ್ಲಿ ರೈ ಅವರ ಆಸ್ತಿ 500 ಕೋಟಿ ರೂಪಾಯಿಗೂ ಹೆಚ್ಚಾಗಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ಮತ್ತು ಇತರೆಡೆಗಳಲ್ಲಿ ತಮ್ಮ ಆಪ್ತ ಮತ್ತು ಸ್ನೇಹಿತರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆ ಆಗಿದೆ.
ಅಜಿತ್ ರೈ ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ ಸಮೀಪ ಸ್ಥಿರಾಸ್ಥಿ ಹೊಂದಿರುವ ಕುರಿತು ಅಧಿಕಾರಿಗಳು ಶೋಧ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ರೆಸಾರ್ಟ್ ಮತ್ತು ಫಾರ್ಮ್ ಹೌಸ್ ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಅಧಿಕಾರಿಯೊಬ್ಬರು ಪುತ್ತೂರು ಮೂಲದ ಈ ಅಧಿಕಾರಿ ಹೊಂದಿರುವ ಬಹುತೇಕ ಆಸ್ತಿಗಳು ಬೇನಾಮಿ ಹೆಸರಿನಲ್ಲಿದ್ದು 7 ದಿನಗಳ ಕಸ್ಟಡಿ ಪಡೆದಿರುವ ಅಧಿಕಾರಿಗಳು ಪ್ರತೀ ಮಾಹಿತಿಯನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಬೇನಾಮಿ ಹೆಸರಿನಲ್ಲಿರುವುದರಿಂದ ಇದು ಈತನೇ ಅಕ್ರಮ ಸಂಪಾದನೆಯಿಂದ ಗಳಿಸಿದ್ದು ಎಂದು ಸಾಬೀತು ಪಡಿಸುವುದು ಕಷ್ಟದ ಕೆಲಸವಾಗಿದೆ.
ಸಾಮಾನ್ಯವಾಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳನ್ನು ಎರಡು ಮೂರು ದಿನಗಳ ಮಟ್ಟಿಗೆ ತನಿಖೆಗಾಗಿ ಕಸ್ಟಡಿಗೆ ಪಡೆಯಲಾಗುತ್ತದೆ. ಆದರೆ ಜೂನ್ 29 ರಂದು ಬಲೆಗೆ ಬಿದ್ದಿರುವ ರೈ ಹೊಂದಿರುವ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಪತ್ತೆ ಹಚ್ಚಲಾಗುತ್ತಿದೆ.
ಆರೋಪಿ 11 ಐಷಾರಾಮಿ ಕಾರುಗಳು , ಬೈಕ್ ಗಳನ್ನೂ ಹೊಂದಿದ್ದು ಈ ಕಾರುಗಳ ಮೌಲ್ಯವೇ 10 ಕೋಟಿ ರೂಪಾಯಿ ಮೀರಿದೆ. ಸಹಕಾರ ನಗರದ ಅಜಿತ್ ರೈ ಮನೆ ಮೇಲೆ ದಾಳಿ ಮಾಡಿದ ವೇಳೆ ಫಾರ್ಮುಲಾ 1 ರೇಸ್ ಟ್ರ್ಯಾಕ್ ನಿರ್ಮಾಣ ಮಾಡಲು ಸಿದ್ಧಪಡಿಸಿದ್ದ ನೀಲ ನಕಾಶೆ ಪತ್ತೆಯಾಗಿದ್ದು, ದೇವನಹಳ್ಳಿ ಬಳಿ ರೇಸಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲು ಮುಂದಾಗಿದ್ದುದು ತಿಳಿದು ಬಂದಿದೆ.
ಈ ಅಧಿಕಾರಿಯು ಬೆಂಗಳೂರಿನಲ್ಲಿಯೇ ಇದ್ದರೆ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಇವರನ್ನು ಹಿಂಬಡ್ತಿ ನೀಡಿ ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನ ಗ್ರೇಡ್ 2 ತಹಶೀಲ್ದಾರ್ ನ್ನಾಗಿ ವರ್ಗಾವಣೆ ಮಾಡಿದೆ. ಆದರೆ ಸಿರಿವಾರದ ನಾಗರಿಕರು, ಸಂಘ ಸಂಸ್ಥೆಗಳು ಈ ವರ್ಗಾವಣೆಯನ್ನು ತೀವ್ರವಾಗಿ ವಿರೋಧಿಸಿದ್ದು ದಕ್ಷ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿವೆ. ತಪ್ಪಿದಲ್ಲಿ ತೀವ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿವೆ.
ಮೊದಲೆಲ್ಲ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣಗಳು ಉತ್ತರ ಭಾರತದ ರಾಜ್ಯಗಳಿಂದ ವರದಿ ಆಗುತಿತ್ತು. ಆದರೆ ಇದೀಗ ನಮ್ಮ ರಾಜ್ಯದಲ್ಲೇ ವರದಿ ಆಗಿರುವುದು ಜನತೆಯನ್ನೇ ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ಸರ್ಕಾರಿ ಕೆಲಸಕ್ಕೆ ಸೇರಿದ ವ್ಯಕ್ತಿಯೊಬ್ಬ ಕೇವಲ ಇಪ್ಪತ್ತು ವರ್ಷಗಳಲ್ಲಿ ಐನೂರು ಕೋಟಿ ರೂಪಾಯಿಗಳ ಆಸ್ತಿ ಗಳಿಕೆ ಸಾದ್ಯವಾಗಿದ್ದು ಹೇಗೆ ಎಂದು ಜನರು ಮಾತನಾಡಿಕೊಳ್ಳುತಿದ್ದಾರೆ.
21 ವರ್ಷಕ್ಕೆ ಐನೂರು ಕೋಟಿ ರೂಪಾಯಿ ಆದರೆ ವರ್ಷಕ್ಕೆ ಸುಮಾರು 24 ಕೋಟಿ ರೂಪಾಯಿಗಳಿಗಿಂತ ಸ್ವಲ್ಪ ಹೆಚ್ಚು ಆಗುತ್ತದೆ. ಅಂದರೆ ತಿಂಗಳಿಗೆ ಸುಮಾರು ಎರಡು ಕೋಟಿ ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಈ ಭ್ರಷ್ಟ ಅಧಿಕಾರಿಯ ದಿನದ ಸಂಪಾದನೆಯೇ 6 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗುತ್ತದೆ.