ಮಂಡ್ಯ: ಟಿಪ್ಪು ಜಯಂತಿ ಆಚರಣೆಗೆ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಡ್ಯ ಜಿಲ್ಲಾಡಳಿತ ಶುಕ್ರವಾರ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಟಿಪ್ಪು ಸುಲ್ತಾನ್ 18 ನೇ ಶತಮಾನದ ಮೈಸೂರು ಸಾಮ್ರಾಜ್ಯದ ಆಡಳಿತಗಾರನಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದನು. ಟಿಪ್ಪು ಸುಲ್ತಾನ್ ಮತ್ತು ಅವನ ತಂದೆ ಹೈದರ್ ಅಲಿಯ ಸಮಾಧಿಗಳು ಶ್ರೀರಂಗಪಟ್ಟಣ ಗುಂಬಜ್ ನಲ್ಲಿವೆ.
ಮುಸ್ಲಿಂ ಸಂಘಟನೆಗಳು ಮತ್ತು ಟಿಪ್ಪು ಸುಲ್ತಾನ್ ಅಭಿಮಾನಿಗಳು ಟಿಪ್ಪು ಜಯಂತಿ ಆಚರಿಸಲು ಕರೆ ನೀಡಿದ್ದು, ಮಂಡ್ಯ ಮತ್ತು ಮೈಸೂರು ನಗರಗಳಿಂದ ಜನರು ಆಗಮಿಸಿ ಶ್ರೀರಂಗಪಟ್ಟಣದ ಪಟ್ಟಣದಲ್ಲಿ ಸೇರುವ ನಿರೀಕ್ಷೆಯಿದೆ.
ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ 6 ರಿಂದ ರಾತ್ರಿ 11 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೆರವಣಿಗೆ ಮತ್ತು ಪ್ರತಿಭಟನೆಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.ಆಕ್ಷೇಪಾರ್ಹ ಫೋಟೋಗಳು, ಘೋಷಣೆಗಳು, ಪಟಾಕಿ ಸಿಡಿಸುವುದು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿ ಆದೇಶದಲ್ಲಿ ತಿಳಿಸಲಾಗಿದೆ.
2015ರ ನವೆಂಬರ್ 10ರಂದು ಸಿದ್ದರಾಮಯ್ಯ ಅವರು ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು ಮತ್ತು ರಾಜ್ಯವು ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.
ಟಿಪ್ಪು ಜಯಂತಿ ಆಚರಣೆಯನ್ನು ಹಿಂದಿನ ಬಿಜೆಪಿ ಸರ್ಕಾರ ನಿಷೇಧಿಸಿತ್ತು ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಇನ್ನೂ ಆದೇಶವನ್ನು ಹಿಂತೆಗೆದುಕೊಂಡಿಲ್ಲ. 2019 ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಆಚರಣೆಯನ್ನು ನಿಷೇಧಿಸಿತ್ತು.