ದಕ್ಷಿಣ ಕೊರಿಯಾದ ಬುಸಾನ್ನಲ್ಲಿರುವ ಡಾಂಗ್ ಯೂ ಸೈನ್ಸ್ ಯೂನಿವರ್ಸಿಟಿ ಇಂಡೋರ್ ಜಿಮ್ನಾಸಿಯಂನಲ್ಲಿ ಜೂನ್ 30ರಂದು ನಡೆದ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ 2023 ರ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 32- 42 ಅಂತರದಿಂದ ಸೋಲಿಸಿದ ಭಾರತ ಕಬಡ್ಡಿ ತಂಡ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಇದುವರೆಗೆ ನಡೆದಿರುವ 11 ಆವೃತ್ತಿಗಳಲ್ಲಿ ಭಾರತ ತಂಡ ಎಂಟನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ಜೂನ್ 27 ರಿಂದ ಆರಂಭವಾದ ಈ ಪಂದ್ಯಾವಳಿ ನಾಲ್ಕು ದಿನಗಳ ಕಾಲ ಅಂದರೆ, ಜೂನ್ 30ರವರೆಗೆ ನಡೆಯಿತು. ಈ ಎಲ್ಲಾ ಪಂದ್ಯಾವಳಿಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡ ಭಾರತ ಎಂಟನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯಾವಳಿ ಆರಂಭವಾದ ಮೊದಲ ದಿನದಂದು ಎರಡು ತಂಡಗಳನ್ನು ಎದುರಿಸಿದ್ದ ಭಾರತ, ಎರಡೂ ತಂಡಗಳನ್ನು ಹೀನಾಯವಾಗಿ ಸೋಲಿಸಿತ್ತು. ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಕೊರಿಯಾ ತಂಡವನ್ನು 76-13 ಅಂತರಗಳಿಂದ ಹೀನಾಯವಾಗಿ ಸೋಲಿಸಿದ್ದ ಭಾರತ, ಅದೇ ದಿನ ತನ್ನ 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-20 ಅಂತರದಿಂದ ಸೋಲಿಸಿತ್ತು.
ಮೂರನೇ ಪಂದ್ಯದಲ್ಲಿಯೂ ಭಾರತದ ಭರ್ಜರಿ ಆಟ ಮುಂದುವರಿದು ಜಪಾನ್ ಎದುರು 62-17 ಅಂಕಗಳ ಗೆಲುವನ್ನು ಪಡೆದುಕೊಂಡಿತು. ಹಾಂಗ್ಕಾಂಗ್ ಎದುರು 64-20 ಅಂಕಗಳಿಂದ ಗೆದ್ದ ಭಾರತ ತಂಡಕ್ಕೆ ಲೀಗ್ ಹಂತದಲ್ಲಿ ಪೈಪೋಟಿ ನೀಡಿದ ಏಕಮಾತ್ರ ತಂಡ ಎನಿಸಿದ ಇರಾನ್ ಅನ್ನು 28-33 ಅಂಕಗಳ ಅಂತರದಲ್ಲಿ ಭಾರತದ ಬಗ್ಗು ಬಡಿಯಿತಿ.
ಏಷ್ಯನ್ ಕಬಡ್ಡಿ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು 1980 ರಲ್ಲಿ ಪ್ರಾರಂಭಿಸಲಾಯಿತು. ಈ ಪಂದ್ಯಾವಳಿಯಲ್ಲಿ ಏಷ್ಯಾ ಖಂಡದ ವಿವಿಧ ದೇಶಗಳು ಭಾಗವಹಿಸುತ್ತವೆ. ಇದುವರೆಗೆ ಚಾಂಪಿಯನ್ಶಿಪ್ನಲ್ಲಿ 11 ಆವೃತ್ತಿಗಳು ನಡೆದಿದ್ದು, ಇದರಲ್ಲಿ ಏಳು ಬಾರಿ ಭಾರತ ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ.