ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ಟೈಟಾನ್ ಜಲಾಂತರ್ಗಾಮಿಯ ಅವಶೇಷಗಳು ಬುಧವಾರ ಪತ್ತೆಯಾಗಿದ್ದು, ಅದರ ಜೊತೆಗೆ ಪ್ರವಾಸಿಗರ ದೇಹದ ಭಾಗಗಳು ಕೂಡ ದೊರೆತಿವೆ ಎಂದು ಅಮೆರಿಕದ ಕೋಸ್ಟ್ಗಾರ್ಡ್ ತಿಳಿಸಿದೆ.
ಟೈಟಾನ್ ಜಲಾಂತರ್ಗಾಮಿ ಅವಶೇಷಗಳಲ್ಲಿ ಮಾನವ ಅವಶೇಷಗಳು ಕಂಡು ಬಂದಿದೆ. ಅವನ್ನು ಕೆನಡಾದ ಸೆಂಟ್ ಜಾನ್ಸ್ ಬಂದರಿಗೆ ತರಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಮೆರಿಕ ಕೋಸ್ಟ್ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜೂನ್ 18ರಂದು ಓರ್ವ ಪೈಲಟ್ ಹಾಗೂ 4 ಪ್ರವಾಸಿಗರೊಂದಿಗೆ ಟೈಟಾನ್ ಜಲಾಂತರ್ಗಾಮಿ ತೆರಳಿತ್ತು. ನಂತರ ಅಲ್ಲಿ ಸ್ಫೋಟಗೊಂಡು ನೌಕೆಯಲ್ಲಿದ್ದ ಐವರು ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಕಾಲ ಜಲಾಂತರ್ಗಾಮಿ ಪತ್ತೆಗೆ ಹುಡುಕಾಡಿದ ನಂತರ ಜೂನ್ 23 ರಂದು ಟೈಟಾನ್ ಜಲಾಂತರ್ಗಾಮಿ ಅವಶೇಷ ಪತ್ತೆಯಾಗಿತ್ತು.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಅಟ್ಲಾಂಟಿಕ್ ಸಾಗರಕ್ಕೆ ತೆರಳಿದ್ದ ಓಷನ್ಗೇಟ್ ಎಕ್ಸ್ಪೆಡಿಶನ್ಸ್ ಎಂಬ ಸಂಸ್ಥೆ ನಿರ್ವಹಿಸುವ ಟೈಟಾನ್ ಜಲಾಂತರ್ಗಾಮಿಯ ಅವಶೇಷಗಳು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಪತ್ತೆಯಾಗಿದ್ದವು.
ಜೂನ್ 18ರಂದು ಸಂಜೆ 5,20ರ ಸುಮಾರಿಗೆ ಉತ್ತರ ಅಟ್ಲಾಂಟಿಕ್ನಲ್ಲಿ ಟೈಟಾನಿಕ್ ಅವಶೇಷದ ಕಡೆಗೆ ಪ್ರಯಾಣ ಆರಂಭಿಸಿದ್ದ ಜಲಾಂತರ್ಗಾಮಿ , ಮಧ್ಯರಾತ್ರಿ 1.45ರ ವೇಳೆಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಸಾಗರದ ಒಳಗಡೆ ಸ್ಪೋಟಗೊಂಡಿದ್ದ ಜಲಾಂತರ್ಗಾಮಿಯಲ್ಲಿ ಬ್ರಿಟನ್ನ ಹಮೀಶ್ ಹಾರ್ಡಿಂಗ್, ಸ್ಟಾಕ್ಟನ್ ರಶ್ , ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದರು.
ಟೈಟಾನ್ ಜಲಾಂತರ್ಗಾಮಿ :
ಟೈಟಾನ್ ಜಲಾಂತರ್ಗಾಮಿ ಓಷನ್ ಗೇಟ್ ಕಂಪನಿಯ ಟೈಟಾನ್ ಸಬ್ಮರ್ಸಿಬಲ್ ಆಗಿದೆ. ಇದರ ಗಾತ್ರವು ಒಂದು ಟ್ರಕ್ಗೆ ಸಮನಾಗಿರುತ್ತದೆ. ಇದು 22 ಅಡಿ ಉದ್ದ ಮತ್ತು 9.2 ಅಡಿ ಅಗಲವಿದೆ. ಜಲಾಂತರ್ಗಾಮಿ ಕಾರ್ಬನ್ ಫೈಬರ್ ನಿಂದ ಮಾಡಲ್ಪಟ್ಟಿದೆ. ಟೈಟಾನಿಕ್ ಅವಶೇಷಗಳನ್ನು ನೋಡಲು ಟಿಕೇಟ್ನ ದರ ಒಬ್ಬ ವ್ಯಕ್ತಿಗೆ 2 ಕೋಟಿ ರೂಪಾಯಿ ಇರುತ್ತದೆ.
ಟೈಟಾನಿಕ್ ಹಡಗಿನ ಅವಶೇಷಗಳು:
ಟೈಟಾನಿಕ್ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಸಾಗರದಲ್ಲಿ ಪತ್ತೆಯಾಗಿದ್ದ, ನ್ಯೂಫೌಂಡ್ಲ್ಯಾಂಡ್ನ 700 ಕಿಲೋಮೀಟರ್ಗಳಷ್ಟು ದೂರ ಮತ್ತು ಅಟ್ಲಾಂಟಿಕ್ನ 3,800 ಮೀಟರ್ಗಳಷ್ಟು ಕೆಳಭಾಗದಲ್ಲಿ ಇದೆ.ಈ ಅವಶೇಷಗಳ ಬಳಿ ತಲುಪಲು ಸುಮಾರು 2 ಗಂಟೆಗಳ ಕಾಲ ಬೇಕಾಗುತ್ತದೆ.