ಕನ್ನಡ ಉಳಿಯುವಲ್ಲಿ ಕನ್ನಡ ಶಾಲೆಗಳ ಪಾತ್ರ
ಈ ಹಿಂದಿನ ಲೇಖನದಲ್ಲಿ ಕನ್ನಡದ ಉಳಿವಿಗೆ ನಾವು ಮಾಡಬೇಕಾದ ಕಾರ್ಯಗಳು ಮತ್ತು ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದೆವೆ ಈ ಲೇಖನದಲ್ಲಿ ಕನ್ನಡದ ಶಾಲೆಗಳು ಉಳಿದರೆ ಹೇಗೆ ಕನ್ನಡ ಉಳಿಯುತ್ತದೆ ಎಂಬ ಗಂಭೀರ ವಿಷಯದ ಕುರಿತು ಚರ್ಚಿಸಲಿದ್ದೆವೆ.
ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. ಇದಕ್ಕೆಅನೇಕ ಕಾರಣಗಳಿವೆ ಅವುಗಳ ಕುರಿತು ತಿಳಿದುಕೊಳ್ಳ ಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಒಬ್ಬ ಜನ ಸಾಮಾನ್ಯನ ದೃಷ್ಠಿಯಲ್ಲಿ ನೋಡೋಣ, ತಂದೆ ತಾಯಿಯಾದವರು ತಮ್ಮ ಮಕ್ಕಳ ಉನ್ನತ ಮತ್ತು ಉತ್ತಮ ಶಿಕ್ಷಣಕ್ಕಾಗಿ ಶತಾಯ ಗತಾಯ ಪ್ರಯತ್ನ ಮಾಡಿ ಒಂದು ಉತ್ತಮ ಶಾಲೆಯಲ್ಲಿ ತಮ್ಮ ದಾಖಲಾತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ಆದರೆ ಅವರು ಕನ್ನಡ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡದೆ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ದಾಖಲಾತಿಯನ್ನು ಮಾಡುತ್ತಾರೆ ಇದರಲ್ಲೇನು ಮಹಾ ? ಎಂದು ಭಾವಿಸಬೇಡಿ ಅದರ ಹಿಂದೆ ತಮ್ಮ ಅನುಭವ ಮತ್ತು ಸಮಾಜದಲ್ಲಿ ತಮ್ಮ ಸ್ಥಾನ ಮಾನ ಏನಾಗುತ್ತದೆ ಎಂಬ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ತಮ್ಮ ಸಂಬಂಧಿಕರ ಮಕ್ಕಳು ಕಾನ್ವೆಂಟ್ ಶಾಲೆಗಳಿಗೆ ಹೋಗುತ್ತಾರೆ ನಮ್ಮ ಮಕ್ಕಳು ಮಾತ್ರ ಕನ್ನಡ ಮಾಧ್ಯಮದ ಶಾಲೆಗೆ ಹೋಗಬೇಕೆ ಎಂದು ತಮ್ಮ ಪ್ರತಿಷ್ಠೆಯ ಪ್ರತೀಕವಾಗಿ ತೆಗೆದುಕೊಂಡು ಎಷ್ಟು ಖರ್ಚಾದರೂ ಅಡ್ಡಿಯಿಲ್ಲ ಎಲ್ಲರಂತೆ ನಮ್ಮ ಮಕ್ಕಳೂ ಸಹ ಆಂಗ್ಲ ಮಾಧ್ಯಮದಲ್ಲೇ ಓದಬೇಕು ಎಂದು ಲಕ್ಷಾಂತರ ರೂಪಾಯಿಗಳನ್ನು ಕಟ್ಟಿ ಆಂಗ್ಲ ಮಾಧ್ಯಮದಲ್ಲಿ ದಾಖಲಾತಿಯನ್ನು ಪಡೆಯುತ್ತಾರೆ. ಎಲ್ಲರ ಮನೆಯಲ್ಲಿ ಇದೇ ರೀತಿಯಾದರೆ ಕನ್ನಡದ ಶಾಲೆಗಳು ಮುಚ್ಚಲಾರದೆ ಏನಾಗುತ್ತದೆ ಯೋಚಿಸಿ. ಇದು ಕೇವಲ ಒಂದು ನಗರದ ಕಥೆಯಲ್ಲ ಇಂತಹ ಕಥೆಗಳು ಹಳ್ಳಿ ಹಳ್ಳಿಗಳಿಗೆ ಹಬ್ಬಿವೆ. ಮುಖ್ಯವಾಗಿ ಕನ್ನಡ ಶಾಲೆಗಳು ಉಸಿರಾಡುತ್ತಿರುವುದೆ ಹಳ್ಳಿಗಳಿಂದ ಅಂತಹದ್ದರಲ್ಲಿ ಗ್ರಾಮೀಣ ಭಾಗದ ಶಾಲೆಗಳೆ ಕಾಯಿಲೆ ಬಂದು ಬಿದ್ದರೆ ಮುಂದೆ ಹೇಗೆ ಎಂಬ ಚಿಂತೆ ಈಗಾಗಲೇ ಪ್ರಾರಂಭವಾಗಿದೆ.
ಅಷ್ಟಕ್ಕೂ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಏಕೆ ? ಕನ್ನಡದಲ್ಲಿ ಕಲಿತವರು ಎಲ್ಲರೂ ದಡ್ಡರೆ ಎಂಬ ಭ್ರಾಂತಿ ನಮ್ಮಲ್ಲಿದೆ. ಇದರಿಂದ ಆಂಗ್ಲ ಮಾಧ್ಯಮದಲ್ಲಿ ಕಲಿತವರು ಶ್ರೇಷ್ಟರು ಕನ್ನಡಲ್ಲಿ ಕಲಿತವರು ಕನಿಷ್ಟರು ಎಂಬ ಭಾವನೆಗಳು ಎಲ್ಲರ ಮನದಲ್ಲಿ ಮನೆ ಮಾಡಿದೆ. ಇದು ತೊಲಗಬೇಕು. ಇದನ್ನು ಸರಿಪಡಿಸಲು ಕನ್ನಡ ಶಾಲೆಯಲ್ಲಿ ಕಲಿತು ಸದ್ಯ ಉನ್ನತ ಹುದ್ದೆಯಲ್ಲಿರುವ ಜನರು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಮತ್ತು ಸರ್ಕಾರವು ಇಂತಹ ಯೋಜನೆಗಳು ಅನುಷ್ಠಾನಕ್ಕೆ ಬರಲು ಯೋಜನೆಗಳನ್ನು ರೂಪಿಸುವುದು . ಕನ್ನಡ ಶಾಲೆಗಳು ಕಾನ್ವೆಂಟ್ ಶಾಲೆಗಳ ಮಟ್ಟದ ಉತ್ತಮ ಮಟ್ಟದ ಶಿಕ್ಷಣವನ್ನು ನೀಡಲು ಪ್ರಾರಂಭಿಸಬೇಕು ಆಗ ಸುಲಭವಾಗಿಯೇ ಕನ್ನಡ ಶಾಲೆಗಳಿಗೆ ಮಕ್ಕಳು ದಾಖಲಾತಿಯನ್ನು ಪಡೆಯುತ್ತಾರೆ. ಆದರೆ ನಮ್ಮ ಸರ್ಕಾರಗಳು ಅದನ್ನು ಬಿಟ್ಟು ಮೊಟ್ಟೆ ಕೊಡುವುದಾ ಅಥವಾ ಬಾಳೆಹಣ್ಣು ಕೊಡುವುದಾ ಎಂಬ ಗಹನವಾದ ವಿಚಾರದ ಚರ್ಚೆಯಲ್ಲಿವೆ. ಮೊದಲು ಶಾಲೆಯ ಗುಣಮಟ್ಟ ಸುಧಾರಿಸಬೇಕು ಆಗ ತನ್ನಿಂದ ತಾನೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ಆದರೆ ನಮ್ಮ ಸರ್ಕಾರಗಳು ಕೊಠಡಿಗಳಿಗೆ ಯಾವ ಬಣ್ಣ ಬಳಿಯಬೇಕು ಎಂಬ ವಿಷಯದಲ್ಲಿ ರಾಜಕೀಯವನ್ನು ಮಾಡುತ್ತಿವೆ. ಬದಲಾಗ ಬೇಕಾಗಿರುವುದು ಮಕ್ಕಳ ಜೀವನದ ಬಣ್ಣವೇ ಹೊರತು ಕೊಠಡಿಯ ಬಣ್ಣಗಳಲ್ಲ. ಕೆಲವೊಂದು ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾದ ವಾತಾವರಣವನ್ನು ಮಕ್ಕಳಿಗೆ ನೀಡುತ್ತಿವೆ ಅದು ಶಿಕ್ಷಕರ ಆಸಕ್ತಿಯ ಮೇಲೆಯು ಅವಲಂಬಿತವಾಗಿರುತ್ತದೆ. ಕೇವಲ ಸರ್ಕಾರದ ಸಂಬಳದಲ್ಲಿ ಕಾಲಹರಣ ಮಾಡಿಲಿಕ್ಕಾಗಿಯೇ ಅನೇಕರಿದ್ದಾರೆ ಶಾಲೆಯಲ್ಲಿ ಮಕ್ಕಳ ಕೈಯಿಂದ ತಮ್ಮ ಮನೆಯ ವೈಯಕ್ತಿಕ ಕೆಲಸವನ್ನು ಮಾಡಿಸಿಕೊಳ್ಳುವವರನ್ನು ಸಹ ನೋಡಿದ್ದೆನೆ . ಇದೇ ರೀತಿಯಾದರೆ ಕರ್ನಾಟಕದಲ್ಲಿ ಕನ್ನಡದ ಶಾಲೆಗಳು ಉಳಿಯುವುದು ಕಷ್ಟಸಾಧ್ಯವಾಗುತ್ತದೆ. ಕನ್ನಡದ ಶಾಲೆಗಳೆ ಇಲ್ಲವಾದರೆ ಮುಂದಿನ ಪೀಳಿಗೆಗಳು ಕನ್ನಡ ಕಲಿಯುದಾದರೂ ಹೇಗೆ ಕನ್ನಡವನ್ನು ಮುಂದುವರೆಸುವ ಭುಜಗಳೇ ಇಲ್ಲವಾದರೆ ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆ ಹೇಗೆ ಯೋಚಿಸಿ
ಮುಂದುವರೆಯುತ್ತದೆ.