1983 ಜೂನ್ 25 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ವಿಶೇಷ ದಿನ. ಸತತವಾಗಿ ಗೆಲ್ಲುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ಸೋಲುಣಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದು ಮೈಲಿಗಲ್ಲನ್ನು ಸೃಷ್ಟಿಸಿದ ಹೆಮ್ಮೆಯ ದಿನ. ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದು 40 ವರ್ಷದ ಸಂಭ್ರಮದಲ್ಲಿರುವ ಈ ದಿನವನ್ನು ಮತ್ತಷ್ಟು ವಿಶೇಷವಾಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಕಾರ್ಡ್ ಬಿಡುಗಡೆಗೊಳಿಸಿದೆ.
ಜೂನ್ ,25 ಭಾನುವಾರವಾದ್ದರಿಂದ ಅಂಚೆ ಕಚೇರಿಗಳು ರಜೆ ಇದ್ದ ಹಿನ್ನಲೆಯಲ್ಲಿ ಜೂನ್ 26ರ ಸೋಮವಾರದಂದು ಈ ವಿಶೇಷ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗಿದೆ ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
1983 ರಲ್ಲಿ ವಿಶ್ವಕಪ್ ಗೆದ್ದ ಭಾರತ:
ಜೂನ್ 25, 1983, ಭಾರತೀಯ ಕ್ರಿಕೆಟ್ಗೆ ಇತಿಹಾಸದಲ್ಲಿ ಅವಿಸ್ಮರಣೀಯ ದಿನ . ಲಾರ್ಡ್ಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ದಾಖಲೆ ಸೃಷ್ಟಿಸಿತ್ತು. ಸತತ ಎರಡು ಏಕದಿನ ವಿಶ್ವಕಪ್ ಗೆದ್ದು ಫೈನಲ್ ಪ್ರವೇಶಿಸಿದ್ದ ವೆಸ್ಟ್ ಇಂಡೀಸ್ ತಂಡವನ್ನು 43 ರನ್ ಅಂತರದಲ್ಲಿ ಸೋಲಿಸಿ ಭಾರತ ರೋಚಕ ಗೆಲುವನ್ನು ಪಡೆದಕೊಂಡಿತು.
ಬಲಿಷ್ಠ ವೆಸ್ಟ್ ಇಂಡೀಸ್ ತಂಡದ ಎದುರು ಕಪಿಲ್ ತಂಡ ಮಂಡಿಯೂರಲಿದ್ದಾರೆ ಎಂಬ ನಿರೀಕ್ಷೆ ಸುಳ್ಳಾಯಿತು. ತನ್ನ ಸಾಮರ್ಥ್ಯಕ್ಕೆ ಹೋಲಿಸಿದರೆ ಸಾಧಾರಣ ಎನ್ನುವಂತಿದ್ದ ಭಾರತ ತಂಡದ ಸಾಧಾರಣ ಮೊತ್ತವನ್ನು ಎದುರಿಸಲಾಗದೇ ಲಾಯ್ಡ್ ನೇತೃತ್ವದ ಪಡೆ 140 ರನ್ಗಳಿಗೆ ಸೋತು ತಲೆಬಾಗಿತು. ಭಾರತೀಯರು 43 ರನ್ಗಳ ಜಯ ದಾಖಲಿಸುವುದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.