ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗಿದೆ. ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದರೆ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪರಿಷ್ಕರಣೆಯಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ಸರ್ಕಾರ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸೇರಿಸಿದ್ದ ವಿವಾದಿತ ಪಠ್ಯಗಳ ಪೈಕಿ ಕನ್ನಡ ಭಾಷಾ ವಿಷಯದ ನಾಲ್ಕು ಪಠ್ಯ ಸೇರಿದಂತೆ 15ಕ್ಕೂ ಹೆಚ್ಚು ವಿವಾದಿತ ಪಾಠಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಕೈ ಬಿಡಲು ಸರ್ಕಾರ ನಿರ್ಧರಿಸಿದೆ. ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳೂ ಸೇರಿದಂತೆ ಹಲವು ಪಠ್ಯಗಳಿಗೆ ಕೊಕ್ ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಈಗಾಗಲೇ ರಾಜ್ಯದಲ್ಲಿ ಶಾಲೆಗಳು ಶುರುವಾಗಿವೆ. 2023-24ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯ ಪುಸ್ತಕಗಳ ಮುದ್ರಣ ಕೂಡಾ ಆಗಿದೆ. ಆದ್ದರಿಂದ ಈ ವರ್ಷ ಹೊಸದಾಗಿ ಪಠ್ಯ ಪುಸ್ತಕ ಮುದ್ರಣ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಇದರ ಬದಲಾಗಿ ಪಠ್ಯ ಪುಸ್ತಕದಲ್ಲಿ ಇರೋ ವಿವಾದಿತ ಪಾಠಗಳನ್ನು ಪಟ್ಟಿ ಮಾಡಿ ಅದನ್ನು ಮಕ್ಕಳಿಗೆ ಬೋಧನೆ ಮಾಡದಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ.
ಪಠ್ಯ ಪರಿಷ್ಕರಣೆಯಿಂದ ಹಿಂದೆ ಸರಿದ ಬರಗೂರು ರಾಮಚಂದ್ರಪ್ಪ :
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪರಿಷ್ಕರಣೆ ಮಾಡಿದ್ದರು. ಇದೀಗ ಮತ್ತೆ ಬರಗೂರು ರಾಮಚಂದ್ರಪ್ಪ ಅವರೇ ಮತ್ತೊಮ್ಮೆ ಪಠ್ಯ ಪರಿಷ್ಕರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪರಿಷ್ಕರಣೆಯಿಂದ ಹಿಂದೆ ಸರಿದಿದ್ದಾರೆ.