ಅಮೆರಿಕ ರಾಜಧಾನಿ ವಾಷಿಂಗ್ಟನ್ ನಗರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತ್ತೀಚೆಗಷ್ಟೇ ನಿರ್ದೇಶಕ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ ಒಟ್ಟಿಗೆ ಅಮೆರಿಕಾದ ವಾಷಿಂಗ್ಟನ್ನ ಸಿಯಾಟಲ್ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ನಲ್ಲಿ ರಿಷಬ್ ಶೆಟ್ಟಿಗೆ ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಸಹ ಉಪಸ್ಥಿತರಿದ್ದರು.
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಹಲವು ಪ್ರಶಸ್ತಿಗಳು ಒಲಿದಿವೆ ಅದರ ಪಟ್ಟಿಗೆ ಇದೀಗ ವಿಶ್ವ ಕನ್ನಡಿಗ ಪ್ರಶಸ್ತಿ ಸೇರಿದೆ.
ಅಮೆರಿಕ ಹಾಗೂ ವಾಷಿಂಗ್ಟನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಟ್ರಸ್ಫರ್ಡ್ ಅವರು, ರಿಷಬ್ ಶೆಟ್ಟಿ ಅವರ “ಕಾಂತಾರ” ಸಿನಿಮಾವನ್ನು ಯುನಿವರ್ಸಲ್ ಸಿನಿಮಾ ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ, ಅಮೆರಿಕಾದ ಎಲ್ಲ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ 1800 ಕ್ಕೂ ಅಧಿಕ ಕನ್ನಡಿಗರು ಭಾಗವಹಿಸಿದ್ದರು. ಚಿನ್ನದ ಲೇಪನ ಹೊಂದಿರುವ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ
ಪ್ಯಾರಾಮೌಂಟ್ ಥಿಯೇಟರ್:
ವಾಷಿಂಗ್ಟನ್ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ ಗೆ 95 ವರ್ಷಗಳ ಇತಿಹಾಸವಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಸಾಕಷ್ಟು ಗಣ್ಯರು ಈ ಸ್ಥಳದಲ್ಲಿ ಭಾಷಣ ಮಾಡಿದ್ದಾರೆ. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿವೆ.ಇಂತಹ ಇತಿಹಾಸವಿರುವ ಪ್ಯಾರಾಮೌಂಟ್ ಥಿಯೇಟರ್ ನಲ್ಲಿ ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿಯನ್ನು ರಿಷಬ್ ಶೆಟ್ಟಿ ಪಡೆದಿದ್ದಾರೆ.