ಭಾರತದಲ್ಲಿ ಐಫೋನ್ ಉತ್ಪಾದನೆ ಮತ್ತು ಆ್ಯಪಲ್ ಸ್ಟೋರ್ಗಳನ್ನು ಹೆಚ್ಚಿಸುತ್ತಿರುವ ಆ್ಯಪಲ್ ಕಂಪನಿ ಇದೀಗ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಆಪಲ್ ಕಾರ್ಡ್ ಎಂದೂ ಕರೆಯಲಾಗುವ ಈ ಕ್ರೆಡಿಟ್ ಕಾರ್ಡ್ಗಳನ್ನು ಭಾರತೀಯ ಗ್ರಾಹಕರಿಗೆ ನೀಡಲು ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಏಪ್ರಿಲ್ನಲ್ಲಿ ಆಪಲ್ ಸ್ಟೋರ್ಗಳ ಉದ್ಘಾಟನೆಗೆ ಭಾರತಕ್ಕೆ ಬಂದಿದ್ದ ಸಿಇಒ ಟಿಮ್ ಕುಕ್ ಅವರು ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿಧರ್ ಜಗದೀಶ್ ಅವರನ್ನು ಭೇಟಿಯಾಗಿದ್ದರು ಎಂದು ಮನಿ ಕಂಟ್ರೋಲ್ ತನ್ನ ವರದಿಯಲ್ಲಿ ತಿಳಿಸಿದೆ.
ಆ್ಯಪಲ್ ಸಂಸ್ಥೆ ಯಾವುದೇ ಜಂಟಿ ಭಾಗಿತ್ವ ಇಲ್ಲದೇ ತನ್ನದೇ ಪರಿಪೂರ್ಣ ಕ್ರೆಡಿಟ್ ಕಾರ್ಡ್ ಅನ್ನು ಭಾರತದಲ್ಲಿ ತರಲು ಬಯಸಿತ್ತು. ಆದರೆ, ಆರ್ಬಿಐ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರಿಂದ ಎಚ್ಡಿಎಫ್ಸಿ ಬ್ಯಾಂಕ್ ಜೊತೆ ಆ್ಯಪಲ್ ಮಾತುಕತೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಆಪಲ್ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಅಮೆರಿಕದಲ್ಲಿ ಚಾಲ್ತಿಯಲ್ಲಿದೆ. ಕಾರ್ಡ್ ಅನ್ನು ಗೋಲ್ಡ್ಮನ್ ಸ್ಯಾಚ್ಸ್ ಮತ್ತು ಮಾಸ್ಟರ್ಕಾರ್ಡ್ ಜಂಟಿ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಟೈಟಾನಿಯಂ ಲೋಹದಿಂದ ಮಾಡಲ್ಪಟ್ಟಿದೆ.
ಆಪಲ್ ಕಾರ್ಡ್ನ ವಿಶೇಷತೆ:
- ಆಪಲ್ ಕಾರ್ಡ್ನೊಂದಿಗೆ ನಿಯಮಿತ ಖರೀದಿಗಳನ್ನು ಮಾಡುವ ಗ್ರಾಹಕರು ಶೇ.1ರಷ್ಟು ಕ್ಯಾಶ್ಬ್ಯಾಕ್ ಅನ್ನು ಗಳಿಸಬಹುದು.
- ಆಪಲ್ ಪೇ ಮೂಲಕ ಹಣ ಪಾವತಿಸಿದರೆ ಇದೇ ಪ್ರಮಾಣ ಶೇ. 2ರಷ್ಟು ಕ್ಯಾಶ್ಬ್ಯಾಕ್ ಅನ್ನು ಪಡೆಯಬಹುದು.
- ಆಪಲ್ ಸ್ಟೋರ್ಗಳಲ್ಲಿ ಮತ್ತು ಆಯ್ದ ಪಾಲುದಾರರಲ್ಲಿ ಹಣ ಪಾವತಿಸಿದಲ್ಲಿ ಶೇ. 3ರಷ್ಟು ಕ್ಯಾಶ್ಬ್ಯಾಕ್ ಗಳಿಸಬಹುದು.
- ಆಪಲ್ ತನ್ನ ಆಪಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸುವುದಿಲ್ಲ.
- ಕಂಪನಿಯು ವಿದೇಶಿ ವಹಿವಾಟು, ಹಿಂದಿರುಗಿದ ಪಾವತಿ ಅಥವಾ ವಾರ್ಷಿಕ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ವಿಧಿಸುವುದಿಲ್ಲ. ಆದರೆ ಬಳಕೆದಾರರು ಬ್ಯಾಲೆನ್ಸ್ ಕ್ಯಾರಿಂಗ್ಗೆ ಬಡ್ಡಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಆಪಲ್ ಕಾರ್ಡ್ ಮಾಲೀಕರು ತಮ್ಮ ದೈನಂದಿನ ಹಣವನ್ನು ಠೇವಣಿ ಮಾಡಲು ಶೇ. 4.15ರ ಬಡ್ಡಿಯ ಉಳಿತಾಯ ಖಾತೆಯನ್ನು ಸಹ ತೆರೆಯಬಹುದು.
- ಪ್ರತಿ ಗ್ರಾಹಕರು ಪ್ರತಿ ಕಾರ್ಡ್ ಗೆ ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ.