ಜೂನ್ 5ರಂದು ಪ್ರತಿವರ್ಷವು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷವು ಒಂದೊಂದು ಧ್ಯೇಯ ವಾಕ್ಯದಲ್ಲಿ ಆಚರಿಸಲಾಗುತ್ತದೆ. ಆದರಂತೆ ಈ ವರ್ಷ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
2016 ರಲ್ಲಿ ಜಾರಿಗೆ ಬಂದಿದ್ದ ಪ್ಲಾಸ್ಟಿಕ್ ನಿಷೇಧ ನಿಯಮ ಮತ್ತು 2022 ರಲ್ಲಿ ಅವುಗಳ ತಿದ್ದುಪಡಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸುವ ಮೂಲಕ ಹೆಚ್ಚು ಕಠಿಣ ನಿಯಮಗಳನ್ನು ಜಾರಿಗೆ ತರಲಾಯಿತು ಆದರೂ, ಪ್ಲಾಸ್ಟಿಕ್ ನ ಬಳಕೆ ಇನ್ನೂ ಹೇರಳವಾಗಿ ಕಂಡುಬರುತ್ತಿದೆ.
ಪರಿಸರ ಸಂರಕ್ಷಣೆಯಲ್ಲಿ ಕರ್ನಾಟಕ ಒಂದು ಹೆಚ್ಚೆ ಮುಂದೆ ಹೋಗಿ ಕರಾವಳಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಕೆ-ಶೋರ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ನೀಲಿ-ಪ್ಲಾಸ್ಟಿಕ್ ಯೋಜನೆ ಎಂದೂ ಹೇಳಲಾಗುತ್ತದೆ. ರಾಜ್ಯದ ಪರಿಸರ ಮತ್ತು ಅರಣ್ಯ ಇಲಾಖೆಗಳು ಅರಬ್ಬಿ ಸಮುದ್ರದಿಂದ ಪ್ಲಾಸ್ಟಿಕ್ ತೆರವುಗೊಳಿಸಲು 5 ವರ್ಷಗಳ ಕಾಲ ಯೋಜನೆಯನ್ನು ಕೈಗೊಂಡಿವೆ. ಕರ್ನಾಟಕ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಕೆ-ಶೋರ್ ಯೋಜನೆ ಎಂದರೇನು?
ಕೆ-ಶೋರ್ ಯೋಜನೆಯಡಿಯಲ್ಲಿ, ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಯ ನೇತೃತ್ವದ ರಾಜ್ಯ ಸರ್ಕಾರದ ಇಲಾಖೆಗಳು ಸಮುದ್ರದಲ್ಲಿನ ಪ್ಲಾಸ್ಟಿಕ್ನ ಪ್ರಮಾಣ ಮತ್ತು ಗುಣಮಟ್ಟವನ್ನು ಅಧ್ಯಯನ ಮಾಡುತ್ತದೆ ಮತ್ತು ಅದನ್ನು ತೆರವುಗೊಳಿಸುತ್ತದೆ.
ವಿಶ್ವಬ್ಯಾಂಕ್ನ ಬೆಂಬಲದೊಂದಿಗೆ ಈ ಯೋಜನೆಯನ್ನು 5 ವರ್ಷಗಳ ಕಾಲ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಾಗಿ ವಿಶ್ವಬ್ಯಾಂಕ್ 840 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಪುರಸಭೆ ಆಡಳಿತಗಳು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಇಲಾಖೆಗಳು, ನಗರ ನಿಗಮಗಳು, ಕರ್ನಾಟಕ ಜೀವವೈವಿಧ್ಯ ಮಂಡಳಿ ಇತರ ವಿಭಾಗಗಳನ್ನು ಒಳಗೊಂಡಿರುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.
ಈ ಯೋಜನೆ ತೇಲುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾತ್ರವಲ್ಲದೆ ಪ್ಲಾಸ್ಟಿಕ್ ಗೆ ಸಂಬಂಧಿಸಿದ ಎಲ್ಲಾ ತ್ಯಾಜ್ಯವನ್ನೂ ತೆರವುಗೊಳಿಸುತ್ತಿದೆ. ಜಲಚರಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಮೈಕ್ರೋಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮವು ನದಿಮುಖಗಳು, ಮ್ಯಾಂಗ್ರೋವ್ಗಳು ಹಾಗೂ ಅರಣ್ಯ ರಕ್ಷಣೆಯನ್ನು ಒಳಗೊಂಡಿದೆ.