ಬಿಸಿಸಿಐ ಹಾಗೂ ಪಿಸಿಬಿ ನಡುವಣ ಶೀತಲ ಸಮರ ಅಂತ್ಯವಾಗಿ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಆಯೋಜಿಸುವದಾಗಿ ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು. ಆತಿಥೇಯ ಪಾಕಿಸ್ತಾನ ನಿರ್ಧರಿಸಿದಂತೆ, ಏಷ್ಯಾಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಅಂದರೆ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮತ್ತು ಉಳಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಲು ಎಸಿಸಿ ನಿರ್ಧರಿಸಿತ್ತು. ಆದರೆ ಇದೀಗ ಪಾಕಿಸ್ತಾನ ಮತ್ತೆ ತಗಾದೆ ತೆಗೆದಿದೆ.
ಪಾಕಿಸ್ತಾನ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಲು ಮುಂದಾಗಿದೆ. ವಾಸ್ತವವಾಗಿ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ ನಜಮ್ ಸೇಥಿ ಹೈಬ್ರಿಡ್ ಮಾದರಿಯನ್ನು ಎಸಿಸಿ ಮುಂದೆ ಪ್ರಸ್ತಾಪಿಸಿದ್ದರು. ಆದರೆ ಈಗ ನಜಮ್ ಸೇಥಿ ಅಧಿಕಾರಾವಧಿಯು ಮುಗಿದಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಝಾಕಾ ಅಶ್ರಫ್ ಇನ್ನೇನು ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರಕ್ಕೂ ಮುನ್ನ ಏಷ್ಯಾಕಪ್ ಹೈಬ್ರಿಡ್ ಮಾದರಿಯನ್ನು ಪರಿಶೀಲಿಸುವುದಾಗಿ ಅಶ್ರಫ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅಶ್ರಫ್ ಈಗಾಗಲೇ ಈ ಹೈಬ್ರಿಡ್ ಮಾದರಿಯನ್ನು ನಾನು ವಿರೋಧಿಸಿ ತಿರಸ್ಕರಿಸಿದ್ದೆ. ಪಾಕಿಸ್ತಾನ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಅಂದ ಮೇಲೆ ಪಂದ್ಯಾವಳಿ ಪಾಕಿಸ್ತಾನದಲ್ಲೇ ನಡೆಯಬೇಕು. ಎಲ್ಲಾ ಪ್ರಮುಖ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆಯುತ್ತಿವೆ. ಕೇವಲ ನೇಪಾಳ ಮತ್ತು ಭೂತಾನ್ನಂತಹ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ ಇದು ಪಾಕಿಸ್ತಾನಕ್ಕೆ ನ್ಯಾಯೋಚಿತವಲ್ಲ ಎಂದು ಹೇಳಿದ್ದಾರೆ.
ಹೈಬ್ರಿಡ್ ಮಾದರಿಯ ಬದಲಾವಣೆಗೆ ಕಾರಣ:
ಈ ವರ್ಷದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿರುವುದರಿಂದ ಏಷ್ಯಾಕಪ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಆಟಗಾರರ ಭದ್ರತಾ ದೃಷ್ಠಿಯಿಂದ ಟೀಂ ಇಂಡಿಯಾವನ್ನು ಪಾಕ್ ನೆಲಕ್ಕೆ ಕಳುಹಿಸಲು ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಬಿಸಿಸಿಐ, ಏಷ್ಯಾಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಎಸಿಸಿ ಗೆ ಮನವಿಯನ್ನು ಮಾಡಿತ್ತು. ಆ ಬಳಿಕ ಪಿಸಿಬಿ ಹೈಬ್ರಿಡ್ ಮಾದರಿಯ ಪ್ರಸ್ತಾವನೆಯನ್ನು ಎಸಿಸಿ ಮುಂದೆ ಮಂಡಿಸಿತ್ತು. ಹೀಗಾಗಿ ಈ ಹೈಬ್ರಿಡ್ ಮಾದರಿಯ ಬದಲಾವಣೆಯನ್ನು ಎಸಿಸಿ ಒಪ್ಪಿಕೊಂಡಿತ್ತು.
ಅಶ್ರಫ್ ಹೇಳಿಕೆ ಕುರಿತು ಬಿಸಿಸಿಐ ಅಥವಾ ಎಸಿಸಿಯು ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಪಾಕ್ ಪ್ರಸ್ತಾವನೆಯಂತೆ ಎಸಿಸಿ ಈಗಾಗಲೇ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಪಿಸಿಬಿ ನಾಯಕ ಅಶ್ರಫ್ ನಡವಳಿಕೆಯಿಂದ ಈ ಬಾರಿ ಪಾಕಿಸ್ತಾನವಿಲ್ಲದೆ ಏಷ್ಯಾಕಪ್ ನಡೆಯುವ ಸಾಧ್ಯತೆಗಳಿವೆ.