ಗಣರಾಜ್ಯ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳನ್ನು ಗೌರವಿಸಲಾಗುತ್ತಿರುವುದರಿಂದ ಆಯಾ ರಾಜ್ಯಗಳು ತಮ್ಮ ಅಸ್ಮಿತೆಯನ್ನು ಉಳಿಸಿ, ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಕನ್ನಡಕ್ಕೂ ರಾಷ್ಟ್ರ ಭಾಷೆಯ ಗೌರವವಿದೆ, ಕರೆನ್ಸಿಯಲ್ಲಿ ಸ್ಥಾನವನ್ನೂ ನೀಡಲಾಗಿದೆಯಲ್ಲದೆ ಶಾಸ್ತ್ರೀಯ ಭಾಷೆ ಎಂದು ಗುರುತಿಸುವ ಮೂಲಕ ಪ್ರಾಚೀನತೆಯ ವಿಶೇಷ ಮನ್ನಣೆ ಸಹ ನೀಡಲಾಗಿದೆ. ಕನ್ನಡಿಗರು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ನಾಡಿಗೆ ಹಿರಿಮೆ-ಗರಿಮೆಗಳನ್ನು ತಂದಿತ್ತಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ಸಂಗತಿಯಾಗಿದೆ.
ನಮ್ಮ ನಾಡು ದಕ್ಷಿಣದಲ್ಲಿ ಕೇರಳ, ತಮಿಳುನಾಡು ರಾಜ್ಯಗಳನ್ನು ಪೂರ್ವದಲ್ಲಿ ಆಂಧ್ರ-ತೆಲಂಗಾಣ ಮತ್ತು ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯಗಳ ಗಡಿಗಳನ್ನು ಹೊಂದಿದೆ. ಭಾಷಾವಾರು ಪ್ರಾಂತ್ಯ ರಚನೆ ಆದ ನಂತರವೂ ತಮ್ಮ ಪ್ರದೇಶ ಕನ್ನಡನಾಡಿಗೆ ಸೇರಿಕೊಂಡಿದೆ ಎಂದು ಈ ಎಲ್ಲ ರಾಜ್ಯಗಳೂ ತಕರಾರು ಎತ್ತುತ್ತಲೇ ಇವೆ ! ಇದೇ ಗಡಿ ವಿವಾದ ಸಂಘರ್ಷಕ್ಕೆ ಎಡೆ ಮಾಡಿಕೊಡುವುದು ನಿರ್ವಿವಾದ.
ಯಾವುದೋ ದೌರ್ಬಲ್ಯದ ಕ್ಷಣದಲ್ಲಿ ಬೇರೊಂದು ಭಾಷೆಯ ಆಡಳಿತಕ್ಕೊಳಪಡಬೇಕಾದ ಸಂದರ್ಭ ಏರ್ಪಟ್ಟರೆ ನಮ್ಮ ನುಡಿಯ ಅಸ್ಮಿತೆಗೆ ಧಕ್ಕೆ ಬರುವ ಸಾಧ್ಯತೆಗಳು ಖಂಡಿತ ಇವೆ. ಕಾಸರಗೋಡು, ಸೊಲ್ಲಾಪುರ, ಜತ್ತ, ಹೊಸೂರು ಇತ್ಯಾದಿ ಕನ್ನಡ ಪ್ರಾಬಲ್ಯದ ಪ್ರದೇಶಗಳಲ್ಲಿ ಕನ್ನಡವನ್ನು ಹತ್ತಿಕ್ಕುವ ಮತ್ತು ತಮ್ಮ ಭಾಷೆಗಳನ್ನು ಹೇರುವ ತಂತ್ರಗಳನ್ನು ರೂಪಿಸಲಾಗಿರುವುದೂ ವಾಸ್ತವ. ಕೊಡಗು, ಉತ್ತರ ಕರ್ನಾಟಕಗಳು ಪ್ರತ್ಯೇಕ ರಾಜ್ಯಗಳಾಗಬೇಕೆಂಬ ಅನಪೇಕ್ಷಿತ ಕೂಗು ರಾಜಕೀಯ ಲಾಭಗಳಿಗಾಗಿ ಆಗಾಗ ಕೇಳಿಬರುತ್ತಿರುವುದನ್ನೂ ಈ ಹಿನ್ನೆಲೆಯಲ್ಲಿ ಗಮನಿಸಲೇಬೇಕಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಪರಧರ್ಮೀಯರ ಆಕ್ರಮಣಕ್ಕೆ ತುತ್ತಾದುದರ ಪರಿಣಾಮವಾಗಿ ಕನ್ನಡದ ಮೂಲ ಪದಗಳ ಜಾಗವನ್ನು ಪರಕೀಯ ಪದಗಳು ಸ್ಥಾನ ಪಡೆದುಕೊಂಡು ಈಗಲೂ ದಬ್ಬಾಳಿಕೆ ನಡೆಸುತ್ತಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ನರ್ತಿಸುತ್ತಿವೆ!
ಕನ್ನಡದ ನಾಡಿನಲ್ಲೇ ಪ್ರತಿ ಜಿಲ್ಲೆಯಿಂದ ಜಿಲ್ಲೆಗೆ ಭಾಷೆಯಲ್ಲಿ ವೈವಿಧ್ಯತೆಯನ್ನು ಕಾಣುತ್ತೆವೆ ಅದು ನಮ್ಮ ಭಾಷೆಯ ಸೊಗಡನ್ನು ಹೆಚ್ಚಿಸುತ್ತದೆ. ಅಂದ ಮಾತ್ರಕ್ಕೆ ನಾವೆಲ್ಲರೂ ಭಿನ್ನರಲ್ಲ. ಆದರೆ ರಾಜಕೀಯ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗನ್ನು ಮುಂದೆ ತರುತ್ತವೆ. ಕೆಲವೊಂದು ಬಾರಿ ಯೋಚಿಸಿದಾಗ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅದು ಸತ್ಯವು ಎಂದೆನಿಸುವುದು ಸಹಜ ಆದರೆ ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕೆಲವು ಜಿಲ್ಲೆಗಳಿಗೆ ಮಾತ್ರವೇ ಸಿಮೀತವಾದಂತೆ ಕಾಣುವುದು ಸಹಜ ಇದನ್ನು ಸರಿದೂಗಿಸಲು ರಾಜ್ಯದ ಎಲ್ಲ ಪ್ರದೇಶಗಳತ್ತ ಅಭಿವೃದ್ಧಿಯನ್ನು ಮಾಡುವತ್ತ ಎಲ್ಲ ಪಕ್ಷದ ಸರ್ಕಾರಗಳು ಗಮನ ಹರಿಸಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಗಡಿ ಜಿಲ್ಲೆಗಳಲ್ಲಿ ಅಧಿಕ ಅಭಿವೃದ್ಧಿಯನ್ನು ಕೈಗೊಂಡರೆ ಅಲ್ಲಿನ ಅನ್ಯಭಾಷಿಗಳು ಸುಲಭವಾಗಿ ನಮ್ಮ ಭಾಷೆ ಮತ್ತು ನಮ್ಮ ಆಡಳಿತವನ್ನು ಒಪ್ಪಿಕೊಳ್ಳುತ್ತಾರೆ.
ನಾಡು, ನುಡಿಯ ಅಸ್ಮಿತೆಯ ಉಳಿವಿಗಾಗಿ ಈಗಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಮುಂದುವರಿಯುತ್ತಾ, ದೇಶದ ಭಾವೈಕ್ಯತೆಗಾಗಿ ಶ್ರಮಿಸುವುದು ಈಗಿನ ಸಂದರ್ಭದಲ್ಲಿ ಅಗತ್ಯವಲ್ಲ, ಅನಿವಾರ್ಯ.
ಮುಂದುವರೆಯುತ್ತದೆ.