‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ನಾಯಕರಾಗಿ ನಟಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದಕ್ಕೆ ಕನ್ನಡತಿ ಧಾರಾವಾಹಿ ಖ್ಯಾತಿ ರಂಜನಿ ರಾಘವನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸದ್ದಿಲ್ಲದೆ ಸೆಟ್ಟೇರಿದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಹದಿನೇಳು ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಕನ್ನಡದ ಚಿತ್ರರಂಗದ ಖ್ಯಾತ ನಟರೊಬ್ಬರು ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿಶೋರ್ ಮೇಗಳಮನೆ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಿಶೋರ್ ಮೇಗಳಮನೆ ಅವರೆ ಬರೆದಿದ್ದಾರೆ. ಕಿಶೋರ್ ಅವರಿಗೆ ಇದು ಚೊಚ್ಚಲ ನಿರ್ದೇಶನವಾಗಿದೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ರಾಮಚಂದ್ರಯ್ಯ ಕೆ.ಜಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಾಯಕರಾಗಿ ಹೆಸರು ಮಾಡಿರುವ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನವಿರಲಿದೆ.ಶಿವಮಣಿ (ನಿರ್ದೇಶಕ), ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ರಂಜನಿ ರಾಘವನ್ ನಟನೆಯ ‘ಕನ್ನಡತಿ’ ಧಾರಾವಾಹಿ ಕೆಲ ತಿಂಗಳುಗಳ ಹಿಂದೆ ಅಂತ್ಯ ಆಗಿತ್ತು. ರಂಜನಿ ರಾಘವನ್ ‘ರಾಜಹಂಸ’, ‘ಠಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ನೈಟ್ ಕರ್ಫ್ಯೂ’, ‘ಸತ್ಯಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆಯ ಜೊತೆಗೆ ರಂಜನಿ ಚಂದನವನದಲ್ಲೂ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ರಂಜನಿ ಒಬ್ಬ ಉತ್ತಮ ಬರಹಗಾರ್ತಿಯಾಗಿದ್ದು, ಅವರ ನಟನೆಗೆ ಇರುವಂತೆ ಅವರ ಬರಹಗಳಿಗೂ ಅಭಿಮಾನಿಗಳಿದ್ದಾರೆ.