ಇಂಟರ್ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೋ) ಫ್ರಾನ್ಸಿನ ಏರ್ಬಸ್ ಕಂಪನಿಯ ಜೊತೆ 500 A320 ಮಾದರಿಯ ವಿಮಾನ ಖರೀದಿಗೆ ಸೋಮವಾರ ಒಪ್ಪಂದವನ್ನು ಮಾಡಿಕೊಂಡಿದೆ. ಇಂಡಿಗೋ ಒಂದೇ ಬಾರಿಗೆ ಇಷ್ಟು ದೊಡ್ಡ ಆರ್ಡರ್ ಮಾಡಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. 2030 ಮತ್ತು 2035ರ ಸಮಯದಲ್ಲಿ ವಿಮಾನವನ್ನು ಏರ್ಬಸ್ ಕಂಪನಿ ಇಂಡಿಗೋಗೆ ವಿತರಣೆ ಮಾಡಲಿದೆ.
ನಾಲ್ಕು ತಿಂಗಳ ಹಿಂದೆ, ಟಾಟಾ ಗ್ರೂಪ್ನ ಏರ್ಲೈನ್ಸ್ ಏರ್ ಇಂಡಿಯಾ 470 ವಿಮಾನಗಳಿಗಾಗಿ ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿತ್ತು, ಈಗ ಈ ದಾಖಲೆಯನ್ನು ಇಂಡಿಗೋ ಮುರಿದುಹಾಕಿದೆ.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಏರ್ ಶೋ 2023ರಲ್ಲಿ ಮೊದಲ ದಿನವೇ ಏರ್ಬಸ್ ಕಂಪನಿ ಇಂಡಿಗೋ ಜೊತೆಗಿನ ವ್ಯವಹಾರದ ಡೀಲ್ ಘೋಷಣೆ ಮಾಡಿದೆ. ವಿ. ಸುಮಂತ್ರನ್, ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಏರ್ಬಸ್ನ ಸಿಇಒ ಗುಯಿಲೌಮ್ ಫೌರಿ ಮತ್ತು ಏರ್ಬಸ್ನ ಮುಖ್ಯ ವಾಣಿಜ್ಯಿಕ ಕ್ರಿಶ್ಚಿಯನ್ ಸ್ಕೆರೆರ್ ಅವರ ಉಪಸ್ಥಿತಿಯಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಇಂಡಿಗೋ 500 ಏರ್ಬಸ್ A320 ಫ್ಯಾಮಿಲಿ ವಿಮಾನಗಳನ್ನು ಖರೀದಿಸಲು 55 ಬಿಲಿಯನ್ ಡಾಲರ್ ಅಂದರೆ 4.39 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಏರ್ಇಂಡಿಯಾದಿಂದ 470 ವಿಮಾನ ಆರ್ಡರ್:
ನಾಲ್ಕು ತಿಂಗಳ ಹಿಂದೆ, ಟಾಟಾ ಗ್ರೂಪ್ನ ಏರ್ಲೈನ್ಸ್ ಏರ್ ಇಂಡಿಯಾ 470 ವಿಮಾನಗಳಿಗಾಗಿ ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿತ್ತು. ಏರ್ ಇಂಡಿಯಾ ಫ್ರೆಂಚ್ ಕಂಪನಿ ಏರ್ಬಸ್ನಿಂದ 250 ವಿಮಾನಗಳನ್ನು ಮತ್ತು ಅಮೆರಿಕದ ಬೋಯಿಂಗ್ ಕಂಪನಿಯಿಂದ 220 ವಿಮಾನಗಳನ್ನು ಒಪ್ಪಂದದಲ್ಲಿ ಪಡೆಯಲಿದೆ. ಏರ್ ಇಂಡಿಯಾದ ಒಟ್ಟು ಆರ್ಡರ್ನಲ್ಲಿ, 31 ವಿಮಾನಗಳು ವರ್ಷದ ಅಂತ್ಯದ ವೇಳೆಗೆ ಸೇವೆಗೆ ಬರಲಿದ್ದು, ಉಳಿದವು 2025 ರ ಮಧ್ಯದ ವೇಳೆಗೆ ಸೇವೆಗೆ ಪ್ರವೇಶಿಸಲಿವೆ. ಈ ಹಿಂದೆ, ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದದ ದಾಖಲೆಯು ಅಮೆರಿಕನ್ ಏರ್ಲೈನ್ಸ್ ಹೆಸರಿನಲ್ಲಿತ್ತು, ಇದು 2011 ರಲ್ಲಿ ಏರ್ಬಸ್ ಮತ್ತು ಬೋಯಿಂಗ್ಗೆ 460 ವಿಮಾನಗಳನ್ನು ಆರ್ಡರ್ ಮಾಡಿತ್ತು.
6 ಹೊಸ ಸ್ಥಳಗಳಿಗೆ ವಿಮಾನಯಾನ ಸೇವೆ ಆರಂಭಿಸಲಿದೆ ಇಂಡಿಗೋ:
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಬೆಳೆದಿರುವ ಇಂಡಿಗೋ ಬೃಹತ್ ಅಂತಾರಾಷ್ಟ್ರೀ ಯ ವಿಸ್ತರಣಾ ಅಭಿಯಾನ ಆರಂಭಿಸಿದೆ. ಈ ವರ್ಷ ಟಿಬಿಲಿಸಿ, ನೈರೋಬಿ ಮತ್ತು ತಾಷ್ಕೆಂಟ್ ಸೇರಿದಂತೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದ ಆರು ಹೊಸ ಸ್ಥಳಗಳಿಗೆ ನೇರ ವಿಮಾನಯಾನ ಪ್ರಾರಂಭಿಸಲಿದೆ ಎಂದು ಇಂಡಿಗೋ ಸಂಸ್ಥೆ ಜೂನ್ 3 ರಂದು ಹೇಳಿಕೊಂಡಿತ್ತು. ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಆರಂಭದಲ್ಲಿ ಮುಂಬೈನಿಂದ ನೈರೋಬಿ ಮತ್ತು ಜಕಾರ್ತಾಕ್ಕೆ ನೇರ ವಿಮಾನಯಾನ ಪ್ರಾರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿತ್ತು.
ಆಗಸ್ಟ್ನಲ್ಲಿ ದೆಹಲಿಯಿಂದ ಜಾರ್ಜಿಯಾ, ಟಿಬಿಲಿಸಿ ಮತ್ತು ಬಾಕು, ಅಜರ್ಬೈಜಾನ್ಗೆ ಹಾಗೂ ಸೆಪ್ಟೆಂಬರ್ನಲ್ಲಿ ತಾಷ್ಕೆಂಟ್, ಉಜ್ಬೇಕಿಸ್ತಾನ್ ಮತ್ತು ಅಲ್ಮಾಟಿ, ಕಝಾಕಿಸ್ತಾನ್ಗೆ ಸಂಪರ್ಕ ಹೊಂದಲಿದೆ. ಒಮ್ಮೆ ಈ ಮಾರ್ಗಗಳ ಕಾರ್ಯಾಚರಣೆ ಆರಂಭವಾದರೆ, ಬಜೆಟ್ ಏರ್ಲೈನ್ ಪ್ರಸ್ತುತ 26 ಕ್ಕೆ ಹೋಲಿಸಿದರೆ ಒಟ್ಟು 32 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿತ್ತು.
ಆಗಸ್ಟ್ನಲ್ಲಿ ದೆಹಲಿಯಿಂದ ಹಾಂಗ್ಕಾಂಗ್ಗೆ ದೈನಂದಿನ ಸೇವೆಗಳನ್ನು ಪುನರಾರಂಭಿಸುವುದಾಗಿ ಇಂಡಿಗೋ ಹೇಳಿತ್ತು. ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ವಿಮಾನವನ್ನು ಸ್ಥಗಿತಗೊಳಿಸಲಾಗಿತ್ತು.