ಕಾವ್ಯದ ಸಾರ್ಥಕತೆ ಇರುವುದು ಅದನ್ನು ಓದುವ ಓದುಗನಲ್ಲಿ ಯಾರು ಕೇಳದಿದ್ದರೂ ಕವಿ ತನ್ನ ಪಾಡಿಗೆ ತಾನು ಹಾಡಬಹುದು. ಹಾಡುವುದು ಬೇರೆ, ಹಾಡು ಕಟ್ಟಿ ಕೊಡುವುದು ಬೇರೆ. ಜನಪದರು ಹಾಡುತ್ತಿದ್ದರು. ಅದು ಅವರ ಆಸರ, ಬೇಸರ ಕಳೆಯಲು, ಅವರಿಗೆ ತಮ್ಮ ಹಾಡನ್ನು ಯಾರಾದರೂ ಕೇಳಲಿ ಎಂಬ ಬಯಕೆ ಇರಲಿಲ್ಲ. ಆದರೆ ಹಾಡು ಕಟ್ಟಿಕೊಡುವ ಕವಿಯ ಆಲೋಚನೆ ಬೇರೆ, ತನ್ನ ಧ್ವನಿ ನಾಲ್ಕು ಜನರನ್ನು ತಲುಪಲಿ ಎಂದಿರುತ್ತದೆ. ಅದಕ್ಕಾಗಿಯೇ ಜನ್ಮ ಹೇಳುವುದು ‘ಕಟ್ಟಿಯುಮೇನೋ ಮಾಲೆಗಾರ ಹೊಸಬಾಸಿಗಮಂ ಮುಡಿವ ಭೋಗಿಗಳಿಲ್ಲದೆ ಬಾಡಿ ಹೋಗದೆ’ ಎಂದು ಆದ್ದರಿಂದ ಹೂವಿನ ಸಾರ್ಥಕತೆ ಮುಡಿವ ಭೋಗಿಗಳಲ್ಲಿರುವಂತೆ, ಕಾವ್ಯದ ಸಾರ್ಥಕತೆ ಸಹೃದಯನಲ್ಲಿದೆ. ಇಲ್ಲಿ ಕವಿ ಕಾವ್ಯವನ್ನು ಪರಾಗಕ್ಕೂ ಸಹೃದಯನನ್ನು ಮಂದಿಗೂ ಹೋಲಿಸಿದ್ದಾರೆ:
ಬಾ ಶೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವಿ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರ ಬೇರೆಯ ಕರ ಬೇಕೇ?
ಸುಮ್ಮನೆ ವಿರಾಗಿಯ ರೀತಿ ಇರಬಾರದು, ಬೇಸರವಾಗಿ ತಿರುಗಬಾರದು. ಎಲ್ಲ ಬೇಸರವನ್ನು ಹೋಗಲಾಡಿಸುವ, ಬದುಕಿಗೆ ನೆಮ್ಮದಿಯನ್ನು ಕೊಡಬಲ್ಲ ಸಾಮರ್ಥ್ಯ ಕಾವ್ಯಕ್ಕೆ ಇರುತ್ತದೆ. ಅದಕ್ಕೆ ಪರಾಗ ಕರೆಯುತ್ತದೆ. ಸುಮ್ಮನೆ ತಿರುಗುವ ಏಕೆ? ಬಾ, ಕಂಪಿನ ಕರೆಯನ್ನು ಕೊಡುತ್ತಿದ್ದೇನೆ, ನನ್ನಲ್ಲಿ ಕಂಪಿದೆ, ಸವಿ ಬಾ. ಇದು ಕೇವಲ ಪರಾಗವಲ್ಲ: ಇಲ್ಲಿ ಹೂವಿದೆ, ಕಾಯಿ ಇದೆ. ಹಣ್ಣಿದೆ. ಅದರ ರುಚಿ ಇದೆ. ಕಾವ್ಯದಲ್ಲಿ ಬದುಕಿದೆ, ಬದುಕಿನ ಸವಿಯಿದೆ ಎಲ್ಲವನ್ನೂ ಇಲ್ಲಿ ಅರಿತು ಕೊಳ್ಳಲು ಬಾ ಎಂದು ಶೃಂಗವನ್ನು ಅಂದರೆ ಸಹೃದಯನನ್ನು ಕರೆಯುತ್ತಾರೆ:
ಕವನ ಕೋಶವೀ ಕಮಲ ಗರ್ಭದಲಿ ಪರಾಗವೊರಗಿಹುದು.
ನಿನ್ನ ಮುಖಸ್ಪರ್ಶವೂ ಸಾಕು; ಹೊಸ ಸೃಷ್ಟಿಯೆ ಬರಬಹುದು.
ಕಾವ್ಯ ಕೋಶದಲ್ಲಿ ಅದರ ಕಮಲದ ಗರ್ಭದಲ್ಲಿ ಪರಾಗವಿದೆ. ಸತ್ವವಿದೆ. ಸಾರವಿದೆ, ಕಂಪಿದೆ. ನೀನು ಈ ಪರಾಗವನ್ನು ಮುಟ್ಟ ಬೇಕಷ್ಟೆ. ನೀ ಮುಟ್ಟಿದರೆ ಹೊಸ ಸೃಷ್ಟಿಯಾಗುವುದು. ಕಾವ್ಯವನ್ನು ನೀ ಓದಿದರೆ ಅದಕ್ಕೊಂದು ಹೊಸ ಅರ್ಥ ಬರುವುದು, ಹೊಸ ಕಾವ್ಯಲೋಕ ಸೃಷ್ಟಿಯಾಗುವುದು. ಆದ್ದರಿಂದ ಈ ಪರಾಗವನ್ನು ಸವಿದು ಹೊಸ ಲೋಕವನ್ನು ಸೃಷ್ಟಿಸಲು ಬಾ ಎಂದು ಕವಿ ಸಹೃದಯನಿಗೆ ಕರೆ ಕೊಟ್ಟಿದ್ದಾರೆ.